

ಮೈಸೂರು: ನಗರದ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿರುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವಕ್ಕೆ ಬುಧವಾರ ವೈಭವಯುತ ಚಾಲನೆ ದೊರೆಯಿತು.
ಬೆಳಗ್ಗೆ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ನಂತರ ವಿಷ್ಣು ಸಹಸ್ರ ಪಠಣ ನಡೆಯಿತು.
ನಂತರ ಶ್ರೀಗಳು ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯದಿಂದ ಅಲಂಕೃತ ರಥದಲ್ಲಿ ಭವ್ಯ ಮೆರವಣಿಗೆ ಮೂಲಕ ನಾದಮಂಟಪಕ್ಕೆ ಆಗಮಿಸಿದರು.
ಗಾರುಡಿ ಗೊಂಬೆಗಳು, ಪೂಜಾ ಕುಣಿತ, ಪಟದ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ಮೇಳ ಮೆರವಣಿಗೆಯಲ್ಲಿ ಸಾಗಿದವು. ಹಿಂದೆ ಪೂರ್ಣಕುಂಭ ಹೊತ್ತ ಮಹಿಳೆಯರು ಸಾಗುತ್ತಿದ್ದರೆ ಶ್ರೀ ಲಕ್ಷ್ಮೀ ಸಮೇತ ಶ್ರೀ ದತ್ತ ವೆಂಕಟೇಶ್ವರ, ಶ್ರೀ ಆಂಜನೇಯ, ಪಾರ್ವತಿದೇವಿಯ ಉತ್ಸವ ಮೂರ್ತಿಯೊಂದಿಗೆ ಗೋವು, ಕುದುರೆ ಮೆರವಣಿಗೆಯಲ್ಲಿ ಸಾಗಿದವು.
ಫೆ.2ರಂದು ಬೆಳಗ್ಗೆ 7ಕ್ಕೆ ಪವಮಾನ ಹೋಮ, 10ಕ್ಕೆ ಸಕಲ ದೇವತಾ ಹೋಮ, 12ಕ್ಕೆ ಸಚ್ಚಿದಾನಂದೇಶ್ವರ ಸ್ವಾಮಿಗೆ ಏಕಾವರ ರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ 3ಕ್ಕೆ ರುದ್ರಹೋಮ, ಸಂಜೆ 7ಕ್ಕೆ ರುದ್ರಹೋಮ ಪೂರ್ಣಾವತಿ, 3ರಂದು ತ್ರಯೋದಶಿ ಅಂಗವಾಗಿ ಬೆಳಗ್ಗೆ 7ಕ್ಕೆ ಆಯುಷ್ಕಾಮೇಸ್ಟಿ ನಡೆಯಲಿದೆ. 9ಕ್ಕೆ ಅಷ್ಟದ್ರವ್ಯ ಸಹಿತ ಸಹಸ್ರ ಮೋದಕ ಗಣಪತಿ ಹೋಮ, ಸಂಜೆ 4ಕ್ಕೆ ನಾರಾಯಣ ಹೋಮ, ಸಂಜೆ 7ಕ್ಕೆ ಪೂರ್ಣಾವತಿ ಇರಲಿದೆ.
ಫೆ.4ರಂದು ಚತುರ್ದಶಿ ಅಂಗವಾಗಿ ಬೆಳಗ್ಗೆ 7ಕ್ಕೆ ಪ್ರಧಾನ ಯಾಗ - ಆಶಿಷ್ಯ ಹೋಮ ಮತ್ತು ಲಕ್ಷ್ಮೀನಾರಾಯಣ ಹೋಮ, 10ಕ್ಕೆ ಪೂರ್ಣಾಹುತಿ, 11ಕ್ಕೆ ಮಹಾಭಿಷೇಕ ನಡೆಯಲಿದೆ. ಸಂಜೆ 4ಕ್ಕೆ ಪುಣ್ಯ ವಾಚನ, ಸಂಜೆ 6ಕ್ಕೆ ಗುರುಪೂಜೆ ಹಾಗೂ ಸ್ವಾಮೀಜಿಯಿಂದ ವಿಶೇಷ ಸಂದೇಶ ಕಾರ್ಯಕ್ರಮವಿದೆ. ರಾತ್ರಿ 8ಕ್ಕೆ ಪೂರ್ಣಚಂದ್ರನ ದರ್ಶನ, ಫೆ.5ರಂದು ಮಾಘ ಪೂರ್ಣಿಮೆ ಅಂಗವಾಗಿ ಬೆಳಗ್ಗೆ 7ಕ್ಕೆ ಪವಮಾನ ಹೋಮ, ದತ್ತ ಹೋಮ, ಕಾರ್ಯಸಿದ್ಧಿ ಹನುಮಂತನಿಗೆ ವಿಶೇಷ ಅರ್ಚನೆ ನೆರವೇರಲಿದೆ. ಸಂಜೆ 6ಕ್ಕೆ ತೆಪ್ಪೋತ್ಸವ ನೆರವೇರಲಿದೆ.