

ಹುಬ್ಬಳ್ಳಿ : ಬೆಲೆ ಏರಿಕೆಯ ಬಿಸಿ ತಡೆಯಲು ಕೇಂದ್ರ ಗ್ರಾಹಕ ವ್ಯವಹಾರಗಳ ಹಾಗೂ ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಜನರಿಗೆ ಕೈಗೆಟುಕುವ ದರದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ವಿವಿಧ ಅಗತ್ಯ ಧಾನ್ಯಗಳ ವಿತರಣೆ ಆರಂಭಿಸಲಿದೆ.
ಭಾರತ್ ಉತ್ಪನ್ನಗಳ ಹಂತ- 2ರಲ್ಲಿ ಈ ಉತ್ಪನ್ನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ ಎಂದು ಕೇಂದ್ರ ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿಯ ಮೂರು ಸಾವಿರ ಮಠದ ಶಾಲಾ ಆವರಣದಲ್ಲಿ ಸಂಚಾರಿ ವಾಹನಗಳಲ್ಲಿ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆ ಅಡಿಯಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಪ್ರತಿ ಕೆಜಿಗೆ ಅಕ್ಕಿಯನ್ನು 34 ರೂ., , ಗೋದಿ ಹಿಟ್ಟು 30 ರೂ., ಕಡಲೆ ಬೆಳೆ 70 ರೂ., ಹೆಸರು ಬೇಳೆ 107 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ನ. 11 ರಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಲಿದ್ದಾರೆ. ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿರುವರು.
ಗ್ರಾಹಕರಿಗೆ ಅಗತ್ಯ ಆಹಾರ ವಸ್ತುಗಳ ಬೆಲೆ ಏರಿಕೆ ಬಿಸಿ ತಾಗದಿರಲು ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಅಗತ್ಯ ಧಾನ್ಯಗಳ ವಿತರಣೆ ಆರಂಭಿಸಿದೆ. ಜನಸಾಮಾನ್ಯರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಸದಾ ಬದ್ಧ ಎಂಬುದಕ್ಕೆ ಈ ಯೋಜನೆಯೇ ಸಾಕ್ಷಿ ಎಂದೂ ಹೇಳಿದ್ದಾರೆ.