

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಸಾವಿನ ನಂತರ ನಮ್ಮ ದೇಹದ ಅಂಗಾಂಗಗಳು ಮತ್ತೊಂದು ಜೀವಕ್ಕೆ ಆಸರೆಯಾಗುವುದಾದರೆ ಅವುಗಳನ್ನು ದಾನ ಮಾಡುವುದು ಪುಣ್ಯದ ಕೆಲಸ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರಲ್ಲದೆ ತಾವೂ ಅಂಗಾಂಗ ದಾನ ಮಾಡುವುದಾಗಿ ೋಷಿಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಅಯುಷ್ಮಾನ್‌ಭವ 3.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮರಣದ ನಂತರ ನಮ್ಮ ಅಂಗಾಂಗಗಳನ್ನು ದಾನ ಮಾಡುವುದಾದರೆ ಬದುಕಿರುವಾಗ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ಆಗ ಮಾತ್ರ ದಾನ ಮಾಡುವ ಅಂಗಾಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದರು.
ದೇಶದಲ್ಲಿ ಪ್ರತಿ ದಿನ ಸಾವಿರಾರು ಜನ ಮರಣ ಹೊಂದುತ್ತಾರೆ. ಅದರಲ್ಲಿ ಕೆಲವರು ಆರೋಗ್ಯ ಸಮಸ್ಯೆಯಿಂದ ಮೃತಪಟ್ಟರೆ ಮತ್ತೆ ಕೆಲವರು ಅಪಘಾತಗಳಲ್ಲಿ ಸಾಯುತ್ತಾರೆ. ಅವರ ಅಂಗಾಂಗಗಳನ್ನು ಅವಶ್ಯವಿರುವವರಿಗೆ ದಾನ ಮಾಡಿದಲ್ಲಿ ದೇಶದಲ್ಲಿನ ಅಂಗವಿಕಲತೆಯ ಸಮಸ್ಯೆಯನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು. ಆ ಮೂಲಕ ಆರೋಗ್ಯವಂತ ಭಾರತದ ಕನಸು ನನಸಾಗಿಸಬಹುದು ಎಂದರು.
ಆರೋಗ್ಯ ಇಲಾಖೆಯ ಹಲವು ಸಿಬ್ಬಂದಿ ಅಂಗಾಂಗ ದಾನ ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೀಣಾ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕರು ಅಂಗಾಂಗ ದಾನ ಮಾಡುವುದಾಗಿ ತಿಳಿಸಿದ್ದು, ರಾಜ್ಯದಲ್ಲೇ ಅಂಗಾಂಗ ದಾನ ಮಾಡಿದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.