ಮೈಸೂರು: ಮೈಸೂರು: ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ ಮತ್ತು ಬರವಣಿಗೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿನ ಚಟುವಟಿಕೆಗಾಗಿ ಸ್ಥಾಪಿಸಿರುವ ‘ಅನುಭೂತಿ ಟ್ರಸ್ಟ್’ಗೆ ಮೇ 31ರಂದು ಚಾಲನೆ ನೀಡಲಾಗುವುದು ಎಂದು ಟ್ರಸ್ಟ್ ಕಾರ್ಯದರ್ಶಿ ಶ್ರೀವಿದ್ಯಾ ಕಾಮತ್ ತಿಳಿಸಿದರು.
ನಗರದ ರಂಗಾಯಣದ ಬಿ.ವಿ.ಕಾರಂತ ರಂಗ ಚಾವಡಿಯಲ್ಲಿ ಅಂದು ಸಂಜೆ 5.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ನಟ ಮಂಡ್ಯ ರಮೇಶ್ ಅವರು ಟ್ರಸ್ಟ್ ಗೌರವಾಧ್ಯಕ್ಷ ಎಸ್.ರಾಮನಾಥ ರಚಿಸಿರುವ ಡ್ರಾಮಾ ಕ್ಲಬ್ ಹಾಗೂ ಷಡ್ಗುಣ ಎಂಬ ಪುಸ್ತಕ ಬಿಡುಗಡೆಗೊಳಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಲಾ ಪ್ರಪಂಚದಲ್ಲಿನ ಪ್ರಯೋಗಗಳನ್ನು ಇಂದಿನ ಪ್ರಸ್ತುತತೆಗೆ ಹೊಂದಿಸಿ, ಶಿಕ್ಷಣ, ಕಲಿಕೆ, ವ್ಯಕ್ತಿತ್ವ ವಿಕಸನ, ಬದುಕಿನ ಬುನಾದಿಯನ್ನು ಗಟ್ಟಿಗೊಳಿಸಲು ಅಗತ್ಯವಾದ ಕಾರ್ಯಾಗಾರ, ಸಾಮಾಜಿಕ ಕಳಕಳಿ ಸಾರುವಂತಹ ಪ್ರಯೋಗಗಳು, ಇಂದಿನ ಮನಸ್ಸುಗಳಿಗೆ ಉತ್ತಮವಾದ ಸಾಹಿತ್ಯ, ರಂಗಭೂಮಿ ಚಟುವಟಿಕೆಗಳನ್ನು ಸಂಸ್ಥೆ ಹಮ್ಮಿಕೊಳ್ಳಲು ಉದ್ದೇಶಿಸಿದೆ ಎಂದು ಮಾಹಿತಿ ನೀಡಿದರು.
ಟ್ರಸ್ಟ್ ಗೌರವಾಧ್ಯಕ್ಷ ಎಸ್.ರಾಮನಾಥ್, ಟ್ರಸ್ಟ್‌ನ ಎಚ್.ವೈ. ರೂಪಶ್ರೀ ಇದ್ದರು.