ಜೀವನದ ನೆಮ್ಮದಿಗೆ ನಗುವೇ ಮುಖ್ಯ

23 vpt 1.1
ಹೊಂಬೆಳಕು ಕಿರಣ ಮಾಸಿಕ ತತ್ತ್ವ ಚಿಂತನಾಗೋಷ್ಠಿ ಕಾರ್ಯಕ್ರಮವನ್ನು ವಿರಾಜಪೇಟೆಯ ವೈದ್ಯರು ಪಕ್ಷಿ ತಜ್ಞ ಹಾಗೂ ಎಸ್.ವಿ.ನರಸಿಂಹನ್ ಉದ್ಘಾಟಿಸಿದರು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮೋಹನ್ ವರ್ಣೇಕರ್ ಇತರರು ಇದ್ದರು,.
Published on

ವಿರಾಜಪೇಟೆ : ಮನುಷ್ಯ ಆರೋಗ್ಯವಾಗಿರಲು ನಗುವನ್ನು ಕಲಿಯಬೇಕು. ಆಗ ಮಾತ್ರ ಶರೀರದಲ್ಲಿ ಶಕ್ತಿ ಹೆಚ್ಚುತ್ತದೆ ಎಂದು ಮೈಸೂರಿನ ಖ್ಯಾತ ಸಾಹಿತಿ ಮತ್ತು ಚುಕ್ಕಿಚಿತ್ರ ಕಲಾವಿದ ಮೋಹನ್ ವರ್ಣೇಕರ್ ಹೇಳಿದರು.
ಸಮೀಪದ ಆರಮೇರಿ ಕಳಂಜೇರಿ ಮಠದ ಲಿಂಗರಾಜೇಂದ್ರ ಭವನದಲ್ಲಿ ಇತ್ತೀಚೆಗೆ ನಡೆದ ’ಹೊಂಬೆಳಕು ಕಿರಣ 223 ಮಾಸಿಕ ತತ್ತ್ವ ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಗ್ಯವಾಗಿರೋಣ ಎಂಬ ವಿಷಯದ ಬಗ್ಗೆ ತಮ್ಮ ಉಪನ್ಯಾಸದಲ್ಲಿ ಮಾತನಾಡಿದರು.
ಜೀವನದ ನೆಮ್ಮದಿಗೆ ನಗುವೇ ಮುಖ್ಯ, ಎಷ್ಟೇ ಅಲಂಕಾರ ಮಾಡಿಕೊಂಡರೂ ಮುಖದಲ್ಲಿ ನಗು ಇಲ್ಲದಿದ್ದರೆ ಪ್ರಯೋಜನವಿಲ್ಲ, ಕೋಪಬಂದ ಸಂದರ್ಭ ನಗುವಿಗೆ ಸ್ಪಂದಿಸುವವರು ಅನೇಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಷ್ಟೇ ಒತ್ತಡಗಳಿದ್ದರೂ ನಗುವುದು ನಾಗರಿಕತೆಯ ಆರೋಗ್ಯವಾಗಿರುತ್ತದೆ. ನಗುವಿನಿಂದ ಶರೀರದಲ್ಲಿರುವ ಇತರ ಕಾಯಿಲೆಗಳು ಗುಣವಾಗಲು ಸಾಧ್ಯ. ನಗುವಿನಲ್ಲಿ ಅನೇಕ ಬಗೆಯ ನಗುಗಳಿವೆ. ಆದರೆ ಅಹಂಕಾರ ಮತ್ತು ದ್ವೇಷದ ನಗು ಬೇಡ, ಹೃದಯದಿಂದ ಬರುವಂತ ನಗು ಅವಶ್ಯ ಎಂದು ಹೇಳಿದರು.
ನಾನು 40 ವರ್ಷಗಳಿಗೂ ಹೆಚ್ಚುಕಾಲ ಚುಕ್ಕಿಯ ಮೂಲಕ ಚಿತ್ರಗಳನ್ನು ಬಿಡಿಸುತ್ತಿದ್ದೇನೆ ಎಂದ ಮೋಹನ್, ಕರ್ನಾಟಕದ ಶ್ರೇಷ್ಠ ಸಾಹಿತಿಗಳು, ಹೆಸರಾಂತ ಕವಿಗಳು ಸೇರಿ 20ಕ್ಕು ಹೆಚ್ಚು ಚುಕ್ಕಿಹಾಕಿ ಬಿಡಿಸಿರುವ ಚಿತ್ರಗಳನ್ನು ಸಭೆಯಲ್ಲಿ ಪ್ರದರ್ಶಿಸಿದರು.

ವಿರಾಜಪೇಟೆಯ ವೈದ್ಯ ಹಾಗೂ ಪಕ್ಷಿ ತಜ್ಞ ಎಸ್.ವಿ.ನರಸಿಂಹನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನಗುವುದಕ್ಕೆ ಯಾವುದೇ ವಯಸ್ಸಿನ ಇತಿಮಿತಿ ಇಲ್ಲ. ಮನುಷ್ಯನ ದ್ವೇಷ ದೂರಮಾಡಲು ನಗುಮುಖ್ಯ. ನಮ್ಮೊಳಗೆ ನಾವು ನೆಮ್ಮದಿಯನ್ನು ಕಾಣಲು ಹೃದಯದ ನಗು ಅಗತ್ಯ. ಜೀವನದಲ್ಲಿ ಕಲೆಗಳನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net