ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಉಳಿಸಲು ಒತ್ತಾಯಿಸಿ ಪ್ರತಿಭಟನೆ

A protest was held demanding to save the heritage buildings of Mysore
Published on

ಮೈಸೂರು: ನಗರದ ಪಾರಂಪರಿಕ ಕಟ್ಟಡಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಉಳಿಸಬೇಕು ಎಂದು ಒತ್ತಾಯಿಸಿ ಲೆಟ್ಸ್ ಡೂ ಇಟ್ ಮೈಸೂರು ಹಾಗೂ ವಿವಿಧ ಸಂಘಟನೆಗಳಿಂದ ಭಾನುವಾರ ಸರಸ್ವತಿಪುರಂ ಅಗ್ನಿಶಾಮಕ ದಳದ ಕಚೇರಿ ಎದುರು ಮೊಂಬತ್ತಿ ಹತ್ತಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿ 150 ವರ್ಷ ಪೂರೈಸಿದ 125 ಕಟ್ಟಡಗಳು ಇವೆ. ಈ ಪೈಕಿ 25 ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದು, ಕಟ್ಟಡ ಯಾವ ಸಂದರ್ಭದಲ್ಲಿ ಬೇಕಾದರೂ ಕುಸಿದು ಬೀಳಬಹುದು. ಆದರೆ, ಪಾರಂಪರಿಕ ಕಟ್ಟಡಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಸರ್ಕಾರ ಮೈಸೂರಿಗೆ ನೀಡಿರುವ ಪಾರಂಪರಿಕ ನಗರಿ ಬಿರುದ್ದನ್ನು ಹಿಂಪಡೆಯಲಿ ಎಂದು ಪಾರಂಪರಿಕ ತಜ್ಞ ಪ್ರೊ.ಎನ್. ಎಸ್. ರಂಗರಾಜು ಬೇಸರ ವ್ಯಕ್ತಪಡಿಸಿದರು.

ಲೆಟ್ಸ್ ಡೂ ಇಟ್ ಸಂಸ್ಥೆಯ ಮುಖ್ಯಸ್ಥ ಬಿ.ಎಸ್. ಪ್ರಶಾಂತ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನಗರದ ಪಾರಂಪರಿಕ ಕಟ್ಟಡಗಳ ಉಳಿವಿಗೆ ಆಸಕ್ತಿ ತೋರುತ್ತಿಲ್ಲ. ಪಾರಂಪರಿಕ ಕಟ್ಟಡಗಳ ಉಳಿವಿನ ಕುರಿತು ಸರ್ಕಾರದ ಗಮನ ಸೆಳೆದು ಅನುದಾನ ತರಲು ಅವರು ಆಸಕ್ತಿ ತೋರುತ್ತಿಲ್ಲ. ಸರ್ಕಾರ ನಗರದ ಪಾರಂಪರಿಕ ಕಟ್ಟಡಗಳ ಉಳಿವಿಗೆ ಮುಂದಾಗದೆ ಇದ್ದರೆ ನಗರಕ್ಕೆ ಮುಖ್ಯಮಂತ್ರಿ ಹಾಗೂ ಸಚಿವರು ಆಗಮಿಸುವಾಗ ಅವರಿಗೆ ೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ದೇವರಾಜ ಅರಸು ರಸ್ತೆಯ ವರ್ತಕರ ಸಂಘದ ಅಧ್ಯಕ್ಷ ವೀರಭದ್ರಪ್ಪ, ಜಿಲ್ಲಾ ಮ್ಯಾಕ್ಸಿಕ್ಯಾಬ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಸಿ. ರವಿ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net