

ಬೆಂಗಳೂರು: ವೀರಶೈವ ಪಂಚಮಸಾಲಿ ಸಮುದಾಯ ಬಹುದಿನಗಳಿಂದ 2ಎ ಮೀಸಲಾತಿಗಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದು, ಇತ್ತೀಚೆಗೆ ಬೆಳಗಾವಿ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರರ ಮೇಲೆ ಸರ್ಕಾರ ಲಾಠಿ ಚಾರ್ಜ ಮಾಡಿರುವುದು ಖಂಡನೀಯ ಎಂದು ಬೆಂಗಳೂರಿನ ವಿಭೂತಿಪುರ ವೀರಸಿಂಹಾಸನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹೇಳಿದ್ದಾರೆ.
ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹೋರಾಟ ಮಾಡುವ ಹಕ್ಕಿದೆ. ವೀರಶೈವ ಲಿಂಗಾಯತ ಸಮಾಜದಲ್ಲಿ ನೂರಕ್ಕೂ ಹೆಚ್ಚು ಉಪಪಂಗಡಗಳಿದ್ದು, ಅವುಗಳಲ್ಲಿ ಪ್ರಭಲವಾಗಿರುವ ಪಂಚಮಸಾಲಿ ಸಮಾಜದಲ್ಲಿ ಬಹುತೇಕರು ಕೃಷಿ ಕಾರ್ಮಿಕರು, ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಅಂತಹವರಿಗೆ ವಿದ್ಯಾಭ್ಯಾಸ, ಉದ್ಯೋಗ ಇತ್ಯಾದಿ ಕ್ಷೇತ್ರದಲ್ಲಿ ಮೀಸಲಾತಿ ದೊರೆಯಬೇಕೆಂಬ ಕಾರಣಕ್ಕಾಗಿ ಶ್ರೀಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸರ್ಕಾರ ಹೋರಾಟಗಾರರನ್ನು ಕರೆದು ವಾಸ್ತವ ನೆಲೆಗಟ್ಟಿನಲ್ಲಿ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೇ ಹೊರತು ಹೋರಾಟವನ್ನು ಹತ್ತಿಕ್ಕುವುದು, ಹೋರಾಟಗಾರರ ಮೇಲೆ ಪ್ರಕರಣವನ್ನು ದಾಖಲಿಸುವುದು ಉತ್ತಮ ಬೆಳವಣಿಗೆಯಲ್ಲ.
ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡದವರಿಗೂ ಕೇಂದ್ರದ ಓಬಿಸಿ ಮೀಸಲಾತಿ ದೊರೆಯಬೇಕೆಂಬ ಕೂಗು ಈ ಹಿಂದಿನಿಂದಲೂ ಇದೆ. ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ವಿಜಯಪುರ ಶಾಸಕ ಹಾಗು ಪಂಚಮಸಾಲಿ ಹೋರಾಟಗಾರರಲ್ಲಿ ಓರ್ವರಾದ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದು, ಈ ಬಗ್ಗೆ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಸಮುದಾಯದ ಬೇಡಿಕೆಗೆ ಸ್ಪಂದಿಸಬೇಕೆಂದು ಶ್ರೀಗಳು ಒತ್ತಾಯಿಸಿದ್ದಾರೆ.