ವ್ಯಾಪಾರದಲ್ಲಿ ತೊಡಗಿದ್ದವರಿಗೆ ಲಾಠಿ ರುಚಿ

24blrp1
Published on

ಬೇಲೂರು: ಕರೊನಾ ಕರಿನೆರಳು ಜಗತ್ತನ್ನೇ ತಲ್ಲಣಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಲಾಕ್‌ಡೌನ್ ಘೋಷಣೆ ನಡುವೆಯೂ ಮಾರುಕಟ್ಟೆಗಳಲ್ಲಿ ಗುಂಪುಗೂಡಿ ವ್ಯಾಪಾರದಲ್ಲಿ ತೊಡಗಿದ್ದ ಸಾರ್ವಜನಿಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಪ್ರಕರಣ ಮಂಗಳವಾರ ನಡೆಯಿತು.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾರ್ಚ್ 31ರ ವರೆಗೆ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿದೆ. ಆದರೆ ಮಾರ್ಚ್ 25ರಂದು ನಡೆಯಲಿರುವ ಯುಗಾದಿ ಹಬ್ಬಕ್ಕಾಗಿ ಪಟ್ಟಣದ ಐಡಿಎಸ್‌ಎಂಟಿ ಹೊಯ್ಸಳ ವಾಣಿಜ್ಯ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಕೊಳ್ಳಲು ಗುಂಪುಗೂಡಿ ವ್ಯಾಪಾರದಲ್ಲಿ ತೊಡಗಿದ್ದರು. ಹೆಚ್ಚು ಜನರು ಗುಂಪುಗೂಡದಂತೆ ಹಾಗೂ ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡದಂತೆ ಹಲವು ಬಾರಿ ಹೇಳಿದರೂ ಯಾರೂ ಸ್ಪಂದಿಸದ ಕಾರಣ ಪೊಲೀಸ್ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ್ ನೇತೃತ್ವದಲ್ಲಿ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿ ಸಾರ್ವಜನಿಕರನ್ನು ಚದುರಿಸಿದರು.

ಮತ್ತೆ ರಸ್ತೆಯಲ್ಲಿ ಸುಮ್ಮನೇ ಬೈಕ್ ಹಾಗೂ ಕಾರುಗಳಲ್ಲಿ ಶೋಕಿಗಾಗಿ ತಿರುಗಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡ ಪೊಲೀಸರು ಕೆಲವರಿಗೆ ಲಾಠಿ ರುಚಿ ತೋರಿಸಿ, ಪುನಃ ರಸ್ತೆಗೆ ಬಾರದಂತೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು.

ಪಟ್ಟಣದಲ್ಲಿ ತೆರೆದಿದ್ದ ಕೆಲವು ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಮುಚ್ಚುವಂತೆ ತಿಳಿಸಿದರೂ ಕೆಲವರು ಮುಚ್ಚದಿದ್ದರಿಂದ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿ ಬಾಗಿಲು ಹಾಕಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಬೇಲೂರು ಪೊಲೀಸ್ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ್ ಮಾತನಾಡಿ, ಸರ್ಕಾರದ ಆದೇಶದಂತೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನರು ರಸ್ತೆಯಲ್ಲಿ ಓಡಾಡದಂತೆ ಹಾಗೂ ಗುಂಪುಗೂಡದಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಗಮನಕೊಡದ ಹಿನ್ನೆಲೆಯಲ್ಲಿ ಲಾಠಿ ರುಚಿ ತೋರಿಸಬೇಕಾಯಿತು. ಮತ್ತೆ ಯಾರಾದರೂ ಕಾರಣ ರಸ್ತೆಗಿಳಿದು ಓಡಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೇಲೂರು ಪೊಲೀಸ್ ಠಾಣೆ ಮುಂಭಾಗದಲ್ಲಿ ಬ್ಯಾರಿಕೇಡ್ ನಿರ್ಮಿಸಿ ತಾಲೂಕಿಗೆ ಒಳ ಬರುವವರು ಹಾಗೂ ಹೊರ ಹೋಗುವವರನ್ನು ತಡೆದು ಪರಿಶೀಲಿಸಿ ತುರ್ತು ಇರುವವರನ್ನು ಮಾತ್ರ ಬಿಟ್ಟು ಇತರರನ್ನು ವಾಪಸ್ ತಮ್ಮ ತಮ್ಮ ಮನೆಗೆ ಕಳುಹಿಸಲಾಗುತ್ತಿದೆ ಎಂದರು.

ಪಿಎಸ್‌ಐ ಅಜಯ್‌ಕುಮಾರ್, ಎಎಸ್‌ಐ ರಂಗಸ್ವಾಮಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net