ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಖಂಡನೀಯ: ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ ಬೇಸರ

Chidananda swamy
Published on

ಮೈಸೂರು: ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಕೂಡಲ ಸಂಗಮ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಬಂಧನ ಕ್ರಮ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಂಚಮಸಾಲಿ 2-ಎ ಮೀಸಲಾತಿಗೆ ತಮ್ಮ ಬೆಂಬಲ ಇದೆ. ಪಂಚಮಸಾಲಿ ಮೀಸಲಾತಿ ಹೋರಾಟಗಾರರ ವಿರುದ್ಧ ರಾಜ್ಯ ಸರ್ಕಾರ ನಡೆದುಕೊಂಡ ರೀತಿಯನ್ನು ಖಂಡಿಸುವುದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹೋರಾಟನಿರತ ಸ್ವಾಮೀಜಿಯನ್ನು ಕರೆದು ಸರ್ಕಾರ ಮಾತುಕತೆ ನಡೆಸಬೇಕಾಗಿತ್ತು. ಆದರೆ ಅದನ್ನು ಬಿಟ್ಟು ಹೋರಾಟಗಾರರ ಮೇಲೆ ಲಾಠಿ ಪ್ರಹಾರ ನಡೆಸಿರುವುದು ಸರಿಯಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರೇ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಗೆ ಸೇರಿಸಬೇಕು ಎಂದು ಹೇಳಿದ್ದರು. ಈಗ ಸೇರಿಸಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಹಿಂದೆ ಪ್ರತಿಭಟನೆ ಮಾಡುವುದಕ್ಕೆ ಪ್ರಚೋದನೆ ಕೊಟ್ಟಿದ್ದೆ ಸಿದ್ದರಾಮಯ್ಯ ಎಂದು ಆಪಾದಿಸಿದರು.

ಪಂಚಮಸಾಲಿ ಮೀಸಲಾತಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದು ಆಗಿದೆ. ವೀರಶೈವ-ಲಿಂಗಾಯತ ಮಹಾಸಭಾ ಈಗ ಮಧ್ಯಸ್ತಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು. ಮೊದಲೆಲ್ಲ ಸ್ವಾಮೀಜಿಗಳ ಬಳಿಗೆ ರಾಜಕಾರಣಿಗಳು ಬರುತ್ತಿದ್ದರು. ಆದರೆ ಈಗ ಸ್ವಾಮೀಜಿಗಳೇ ರಾಜಕಾರಣಿಗಳ ಬಳಿ ಹೋಗಬೇಕಾದ ವಿಪರ್ಯಾಸ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರವರ್ಗ 2-ಎ ನಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ, ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ-ಲಿಂಗಾಯತರನ್ನು ಸೇರ್ಪಡೆ ಮಾಡಲು ಸರ್ಕಾರ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತರನ್ನು ದ್ವೇಷ ಮಾಡುವುದೇಕೆ ಎನ್ನುವುದು ತಿಳಿಯುತ್ತಿಲ್ಲ. ಲಿಂಗಾಯತರು ಬಹುಪಾಲು ರೈತರು ಇದ್ದು, ಸಂಕಷ್ಟದಲ್ಲಿದ್ದಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಕ್ರಮವಹಿಸಬೇಕು. ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಚ್ ಮಾಡಿದ ರಾಜ್ಯ ಸರ್ಕಾರ ಲಿಂಗಾಯತ ಸಮುದಾಯವನ್ನು ಹಾಗೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಪ್ರವರ್ಗ-2ರಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಟ್ಟರೆ ಬೇರೆ ಸಮುದಾಯಗಳಿಗೆ ಮೀಸಲಾತಿ ಕಡಿಮೆ ಆಗುತ್ತದೆ ಎನ್ನುವ ಭಾವನೆ ಬರುತ್ತದೆ. ಆದರೆ ಅದಕ್ಕೆ ಕೈ ಕತ್ತರಿಸುತ್ತೇವೆ ಎಂದು ಹೇಳುವುದು ಸರಿಯಲ್ಲ. ಆ ರೀತಿ ಮಾಡುವುದಕ್ಕೆ ಆಗುತ್ತದೆಯೇ. ಇಂತಹ ಹೇಳಿಕೆ ಕೊಡುವಾಗ ಎಚ್ಚರ ವಹಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net