ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿದ ಎಸಿಗಳು

baski new
Published on

ಮಂಗಳೂರು: ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಅನವಶ್ಯಕವಾಗಿ ರಸ್ತೆಗಳಿದ ಸಾರ್ವಜನಿಕರಿಗೆ ಪೊಲೀಸರು ಮಾತ್ರವಲ್ಲ, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳೂ ಲಾಠಿ ಬಿಸಿ ಮುಟ್ಟಿಸುತ್ತಿದ್ದಾರೆ.

ಮಂಗಳೂರು ನಗರ ಹಾಗೂ ಹೊರ ವಲಯದಲ್ಲಿ ಬುಧವಾರ ಜಿಲ್ಲಾಡಳಿತ ನೀಡಿದ ಎಚ್ಚರಿಕೆ ಉಲ್ಲಂಘಿಸಿ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡುತ್ತಿದ್ದವರನ್ನು ತಡೆದು ನಿಲ್ಲಿಸಿದ ಮಂಗಳೂರು ಎಸಿ ಮದನ್ ಮೋಹನ್ ಎರಡೇಟು ಬಿಗಿದು ಮನೆಗೆ ಕಳುಹಿಸಿದ್ದಾರೆ. ಪೊಲೀಸರ ಜತೆ ಎಸಿ, ತಹಸೀಲ್ದಾರ್ ಹಾಗೂ ಮನಪಾ ಅಧಿಕಾರಿಗಳೂ ಕಾರ್ಯಾಚರಣೆಗಿಳಿದು ರಸ್ತೆಯಲ್ಲಿ ಸುತ್ತಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಕುಂದಾಪುರದಲ್ಲಿ ಹಳೇ ಬಸ್ ಸ್ಟಾೃಂಡ್, ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಪರಿಸರದಲ್ಲಿ ಬುಧವಾರ ಅಲೆಯುತ್ತಿದ್ದ ಯುವಕರಿಗೆ ಎಸಿ ಕೆ.ರಾಜು ಲಾಠಿಯೇಟು ನೀಡಿದ್ದಾರೆ. ಶಾಸ್ತ್ರಿ ವೃತ್ತದಲ್ಲಿ ಅನವಶ್ಯಕವಾಗಿ ನಿಲ್ಲುವ ವಾಹನ ಚಾಲಕರನ್ನು ತರಾಟೆಗೆ ತೆಗೆದುಕೊಂಡು, ಉದ್ಧಟತನ ತೋರಿದ ಯುವಕನನ್ನು ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್.ನಾಯ್ಕ ಬಂಧಿಸಿ ದೂರು ದಾಖಲಿಸಿದರು. ಗುರುವಾರ ಹಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ, ಕೆಲವರಿಗೆ ಬಸ್ಕಿ ಶಿಕ್ಷೆ ನೀಡಲಾಯಿತು.

ಕಾರ್ಕಳ ಮೂರುಮಾರ್ಗ ಬಳಿ ತಹಸೀಲ್ದಾರ್ ಲಾಠಿ ಹಿಡಿದು ಕೆಲವು ಯುವಕರಿಗೆ ಎರಡೆರಡೇಟು ಬಿಟ್ಟು ಮನೆಗೆ ಕಳುಹಿಸಿದ್ದಾರೆ.

ಕಣ್ಣೀರು ಹಾಕಿದ ಪೊಲೀಸ್ ಸಿಬ್ಬಂದಿ

ಬೆಳ್ಮಣ್: ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ ಎಂದು ಬೆಳ್ಮಣ್ ಪೇಟೆಯಲ್ಲಿ ಗುರುವಾರ ಪೊಲೀಸ್ ಸಿಬ್ಬಂದಿಯೊಬ್ಬರು ಕಣ್ಣೀರು ಹಾಕಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ದಿನ ಬಳಕೆಯ ವಸ್ತು ಖರೀದಿಸಲು ಬೆಳ್ಮಣ್ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಜನ ರಾಶಿ ರಾಶಿಯಾಗಿ ನಿಂತಿದ್ದು ದೂರ ನಿಂತು ವಸ್ತು ಖರೀದಿಸುವಂತೆ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ವಿನಂತಿಸಿಕೊಂಡರು. ಆದರೂ ಎಚ್ಚೆತ್ತುಕೊಳ್ಳದ ಸಾರ್ವಜನಿಕರನ್ನು ಕಂಡು ಪೊಲೀಸ್ ಸಿಬ್ಬಂದಿ ‘ದಯ ಮಾಡಿ ಅನಗತ್ಯ ಹೊರಬರಬೇಡಿ’ ಎಂದು ಬೇಡಿಕೊಂಡರು.

ನಿಯಮ ಉಲ್ಲಂಘನೆಗೆ ಬಸ್ಕಿ ಶಿಕ್ಷೆ!

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದ ಯುವಕನಿಗೆ ಉಳ್ಳಾಲ, ಬೆಳ್ಮಣ್ ಮುಂತಾದೆಡೆ ಪೊಲೀಸರು ಬಸ್ಕಿ ಶಿಕ್ಷೆ ನೀಡಿದ್ದಾರೆ. ಗುರುವಾರ ತೊಕ್ಕೊಟ್ಟಿನಲ್ಲಿ ಯುವಕನೋರ್ವ ದ್ವಿಚಕ್ರ ವಾಹನದಲ್ಲಿ ತಿರುಗಾಡುತ್ತಿದ್ದು, ಪೊಲೀಸರು ಕೆಲವು ಬಾರಿ ಎಚ್ಚರಿಕೆ ನೀಡಿದರೂ ಕ್ಯಾರ್ ಮಾಡಿರಲಿಲ್ಲ. ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಯುವಕನನ್ನು ತಡೆದ ಪೊಲೀಸರು ರಸ್ತೆ ಮಧ್ಯದಲ್ಲೇ ನಿಲ್ಲಿಸಿ ಬಸ್ಕಿ ಹೊಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net