

ಮಳವಳ್ಳಿ: ಲಿಂಗಾಯತ ಪಂಚಮಶಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಅಕ್ಷಮ್ಯ ಅಪರಾಧವೆಂದು ತಾಲೂಕು ವೀರಶೈವ ಯುವ ಬಳಗದ ಮಾಜಿ ಅಧ್ಯಕ್ಷ ಅಶೋಕ್ ತಿಳಿಸಿದರು.
ಸ್ವತಂತ್ರ ಭಾರತದಲ್ಲಿ ಸಂವಿಧಾನಾತ್ಮಕವಾಗಿ ಹೋರಾಟ ಮಾಡಲು ಎಲ್ಲರಿಗೂ ಅಧಿಕಾರವಿದೆ. ಅದೇ ರೀತಿ ಲಿಂಗಾಯತ ಪಂಚಮಶಾಲಿಗಳು ಹೋರಾಟ ನಡೆಸಿದ್ದು, ಇದನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಲಾಠಿ ಚಾರ್ಜ್ ಮಾಡುವುದರ ಮುಖಾಂತರ ಹೋರಾಟದ ಹಕ್ಕನ್ನ ಕಸಿಯತೊಡಗಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಈಗಿನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕಾಸಪ್ಪನವರ್ ಬಿಜೆಪಿ ಸರ್ಕಾರ ತೊಲಗಬೇಕು ಆಗ ಪಂಚಮಶಾಲಿಗಳಿಗೆ ಮೀಸಲಾತಿ ಸಿಗುತ್ತದೆ ಎಂದು ಬೀಗುತ್ತಿದ್ದರು. ಆದರೆ ಇಂದು ಆ ಇಬ್ಬರೂ ನಾಯಕರು ಆಡಳಿತಾರೂಢ ಸರ್ಕಾರದಲ್ಲಿದ್ದುಕೊಂಡು ಮಾಡಿರುವುದಾದರೂ ಏನು? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವಣ್ಣನವರ ಅನುಯಾಯಿ ಎಂದು ಹೇಳಿಕೊಳ್ಳುತ್ತಾ. ಬಸವ ಭಕ್ತರಿಗೆ ಲಾಟಿಚಾರ್ಜ್ ಮಾಡಿಸಿದ್ದಾರೆ. ಪ್ರತಿಭಟನಾಕಾರರನ್ನು ಕರೆದು ಮಾತನಾಡಬಹುದಿತ್ತು. ಅದನ್ನು ಬಿಟ್ಟು ಸರ್ಕಾರ ಗೂಂಡಾಗಿರಿ ಆಡಳಿತ ನಡೆಸುವುದು ಸರಿಯಲ್ಲ. ಅಧಿಕಾರದ ಅಮಲಿನಲ್ಲಿ ನೀವು ಏನು ಮಾಡಿದರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಮಖ್ಯಮಂತ್ರಿ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಸಮುದಾಯದ ಕ್ಷಮೆ ಯಾಚಿಸಬೇಕೆಂದು. ಅಲ್ಲದೆ ಹೋರಾಟಗಾರರಿಗೆ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.