ಜಿಲ್ಲೆಯಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರ

21adarshkdga10
Published on

ಮಡಿಕೇರಿ: ಕರೊನಾ ಕಂಟಕದಿಂದ ಯೋಗ ದಿನಾಚರಣೆ ಡಿಜಿಟಲ್ ವೇದಿಕೆಯಲ್ಲಿ ನಡೆದರೆ, ವರ್ಷದ ಮೊದಲ ಕಂಕಣ ಸೂರ್ಯಗ್ರಹಣ ಎಫೆಕ್ಟ್ ವ್ಯಾಪಾರೋದ್ಯಮ ಮೇಲೆ ತಟ್ಟಿತು. ಅಪ್ಪಂದಿರ ದಿನದ ಸಂಭ್ರಮದ ಜತೆಗೆ ಜಿಲ್ಲೆಯ ಹಲವೆಡೆ ಮಳೆಯ ಸಿಂಚನವಾಯಿತು.

ಕಳೆದ ಐದು ವರ್ಷಗಳ ಹಿಂದೆ ಆರಂಭಗೊಂಡ ಯೋಗ ದಿನವನ್ನು ಈ ವರ್ಷ ಡಿಜಿಟಲ್ ವೇದಿಕೆಯಲ್ಲಿ ಆಚರಣೆಗೊಂಡಿತು. ಹಿಂದಿನ ವರ್ಷಗಳಲ್ಲಿ ಸಾಮೂಹಿಕವಾಗಿ ಜಿಲ್ಲೆಯಲ್ಲಿ ಯೋಗ ದಿನವನ್ನು ಆಚರಿಸಿ, ಯೋಗ ದಿನದ ಮಹತ್ವ ಸಾರಲಾಗುತ್ತಿತ್ತು. ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಸೋಸಿಯಲ್ ಮೀಡಿಯಾಗಳ ಮೂಲಕ ಯೋಗಪಟುಗಳು ಯೋಗದ ಮಹತ್ವ ಅನಾವರಣ ಮಾಡಿದರು.

ಮನೆಗಳಲ್ಲಿ ಯೋಗ ಮಾಡುವ ಫೋಟೋವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಶಾಸಕ ಕೆ.ಜಿ.ಬೋಪಯ್ಯ ಕುಟುಂಬ ಮನೆಯಲ್ಲಿ ಯೋಗ ಮಾಡಿದರು. ಹಲವರು ಜನಪ್ರತಿನಿಧಿಗಳು, ಅಧಿಕಾರಿಗಳು, ಯೋಗಪ್ರೇಮಿಗಳು ಮನೆಗಳಲ್ಲಿ ಯೋಗ ಮಾಡಿದರು.

ಕಂಕಣ ಸೂರ್ಯಗ್ರಹಣ: ಭಾನುವಾರ ಬೆಳಗ್ಗೆ 10.12 ರಿಂದ ಮದ್ಯಾಹ್ನ 1.31ರವರೆಗೆ ಪಾರ್ಶ್ವ ಸೂರ್ಯ ಗ್ರಹಣ ಗೋಚರಿಸಿತು. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು ಸೂರ್ಯ ಹೊಳೆಯುವ ಬಳೆಯಂತೆ ಕಾಣುವ ಸೌರ ವಿದ್ಯಮಾನವನ್ನು ಜನರು ಕಣ್ತುಂಬಿಕೊಂಡು.

ತಲಕಾವೇರಿ, ಭಾಗಮಂಡಲ, ಓಂಕಾರೇಶ್ವರ, ಇಗ್ಗುತ್ತಪ್ಪ ದೇವಾಲಯದಲ್ಲಿ ಬೆಳಗ್ಗೆ ಪೂಜೆ ನಡೆಸಿ ಬಾಗಿಲು ಮುಚ್ಚಲಾಯಿತು. ಭಕ್ತರ ಪ್ರವೇಶ ನಿರಾಕರಿಸಲಾಗಿತ್ತು. ತಲಕಾವೇರಿ, ಭಾಗಮಂಡಲ ಕ್ಷೇತ್ರ ಹೊರತುಪಡಿಸಿ ಜಿಲ್ಲೆಯ ಇತರ ದೇವಾಲಯಗಳನ್ನು ಸಂಜೆ 5 ಗಂಟೆಯ ನಂತರ ತೆರೆದು ಶುದ್ಧ ಮಾಡಿದರು.

ಅಲ್ಲಲ್ಲಿ ಮಳೆ: ಕೊಡಗು ಜಿಲ್ಲೆಯ ಹಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾದರೆ, ಮಡಿಕೇರಿಯಲ್ಲಿ ಮಧ್ಯಾಹ್ನ ಉತ್ತಮ ಮಳೆಯಾಯಿತು. ನಾಪೋಕ್ಲು, ಗೋಣಿಕೊಪ್ಪ, ಕುಶಾಲನಗರ, ಸುಂಟಿಕೊಪ್ಪ, ಸೋಮವಾರಪೇಟೆ, ಶನಿವಾರಸಂತೆ ಭಾಗದಲ್ಲಿ ಸಾಧಾರಣ ಮಳೆ ಸುರಿಯಿತು.

ವ್ಯಾಪಾರ ಕ್ಷೀಣ: ಕಂಕಣ ಸೂರ್ಯ ಗ್ರಹಣ ಹಿನ್ನೆಲೆ ಹೆಚ್ಚಿನ ಸಂಖ್ಯೆಯ ಜನರು ನಗರ ಪ್ರದೇಶದಲ್ಲಿ ಕಂಡುಬರಲಿಲ್ಲ. ಇದರಿಂದ ವ್ಯಾಪಾರ ಕ್ಷೀಣಿಸಿತ್ತು. ಹೆಚ್ಚಿನ ವಾಹನ ಸಂಚಾರ ಕೂಡ ಇರಲಿಲ್ಲ. ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ, ಪ್ರವಾಸಿ ತಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿತ್ತು.

ಅಪ್ಪಂದಿರ ದಿನ: ಇವೆಲ್ಲದರ ನಡುವೆ ಮನೆಗಳಲ್ಲಿ ಅಪ್ಪನೊಂದಿಗೆ ಮಕ್ಕಳು ಕಾಲಕಳೆದು ಅಪ್ಪಂದಿರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಭಾನುವಾರ ಹಾಗೂ ಪ್ರಸ್ತುತ ಪರಿಸ್ಥಿತಿಯಿಂದ ಅಪ್ಪಂದಿರು ಮನೆಯಲ್ಲೇ ಇದ್ದರು. ಮಕ್ಕಳು ತಂದೆಯೊಂದಿಗೆ ಕಾಲ ಕಳೆದರು. ಸೋಸಿಯಲ್ ಮೀಡಿಯಾಗಳಲ್ಲಿ ಅಪ್ಪನೊಂದಿರುವ ಫೋಟೋ ಹಾಕಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net