

ಗೋಕಾಕ: ಕಲೆಗೆ ಜೀವ ತುಂಬುವ ಶಕ್ತಿ ಬಣ್ಣಕ್ಕಿದೆ. ಚಿತ್ರಕಲೆ ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದನ್ನು ಅಭಿವ್ಯಕ್ತಗೊಳಿಸಿದಾಗ ದೃಶ್ಯಮಾಧ್ಯಮವಾಗಿ ಅನಾವರಣಗೊಳ್ಳುತ್ತವೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಸತೀಶ್ ಶುಗರ್ಸ್ ಅಕಾಡೆಮಿ ಶಾಲಾ ಆವರಣದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ, ನಾಯಕ ಸ್ಟೂಡೆಂಟ್ ೆಡರೇಷನ್ ಹಾಗೂ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಿಮ್ಮೊಂದಿಗೆ ನಾವು ಕಲಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೃಶ್ಯಕಲೆಯಲ್ಲಿ ಮಾತನಾಡುವ ಶಕ್ತಿ, ಭಾವ, ಬಣ್ಣ ಹಾಗೂ ಜೀವವಿದೆ. ಸಹದಯಿಗಳು ಆ ದೃಷ್ಟಿಯಿಂದ ನೋಡಿದಾಗ ಅರ್ಥವಾಗುತ್ತದೆ. ಅಕಾಡೆಮಿ ಇಂಥ ಕಾರ್ಯಕ್ರಮ ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಚಿತ್ರಕಲೆಯಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸಿ ಪ್ರತಿಭೆ ತೋರಿಸಬೇಕು. ಈ ಭಾಗದ ವಿದ್ಯಾರ್ಥಿಗಳು ಮುಂದೆ ಗೋಕಾಕ ಕೀರ್ತಿ ಎಲ್ಲೆಡೆ ಹೆಚ್ಚಿಸಬೇಕು. ಈಗಾಗಲೇ ತಂದೆ ಸತೀಶ ಜಾರಕಿಹೊಳಿ ಅವರು 2 ದಶಕದಿಂದ ಸತೀಶ್ ಶುಗರ್ಸ್ ಅವಾರ್ಡ್ಸ್ ಮೂಲಕ ಸಾಕಷ್ಟು ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುತ್ತಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ ಮಾತನಾಡಿ, ಬದುಕು ಕಟ್ಟಿಕೊಡುವ ಶಕ್ತಿ ಕಲೆಗೆ ಇದೆ. ಮಕ್ಕಳು ನಮ್ಮ ದೇಶದ ಸಂಪತ್ತು, ಕಲೆ, ಸಾಹಿತ್ಯವನ್ನು ಜೀವಂತವಾಗಿ ಇಡುವವರೇ ಮಕ್ಕಳು. ಹಾಗಾಗಿ ಮಕ್ಕಳಗಾಗಿ ಇಂತಹ ಶಿಬಿರಗಳನ್ನು ಕರ್ನಾಟಕ ಲಲಿತಾಕಲಾ ಅಕಾಡೆಮಿ ಹಮ್ಮಿಕೊಂಡಿದೆ ಎಂದರು.
ಚಿತ್ರಕಲಾವಿದರಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಪ್ರಮಾಣಪತ್ರ ನೀಡಿ ಗೌರವಿಸಿದರು. ಹಿರಿಯ ಕಲಾವಿದ ಬಾಬುರಾವ ನಡೋಣಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯೆ ಆಶಾರಾಣಿ ನಡೋಣಿ, ಡಾ.ಲಕ್ಷ್ಮಣ ಚೌರಿ, ಪಿ.ಎಂ ಲಕ್ಷೆಟ್ಟಿ, ವಿದ್ಯಾ ರೆಡ್ಡಿ, ಹೀರಾಚಂದ ಪೂಜೇರಿ ಇತರರಿದ್ದರು.