ಗ್ರಾಮೀಣ ಅಭಿವೃದ್ಧಿ ಕೆಲಸಗಳು ಚುರುಕಾಗಲಿ

SRP_17-01jpj
ಪಟ್ಟಣದ ಪುರಸಭಾ ಕಾರ್ಯಲಯದ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂನ ನೂತನ ಸಿಇಒ ಕೆ.ಆರ್.ನಂದಿನಿ ಕ್ಷೇತ್ರದ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.
Published on

ಶ್ರೀರಂಗಪಟ್ಟಣ: ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರು ಹಾಗೂ ಗ್ರಾಮೀಣ ಭಾಗದ ಕೆಲಸಗಳು ತ್ವರಿತವಾಗಿ ನಿರ್ವಹಣೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ತಾವು ಯಾವ ಸಮಯದಲ್ಲಿ ಬೇಕಾದರೂ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿಹಣಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು.

ಪಟ್ಟಣದ ಪುರಸಭಾ ಕಾರ್ಯಲಯದಲ್ಲಿ ಶನಿವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೇಣು ಸಮ್ಮುಖದಲ್ಲಿ ಕ್ಷೇತ್ರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಗಳಲ್ಲಿನ ಅಭಿವೃದ್ದಿ ಕಾರ್ಯಗಳ ಕುರಿತು ಮಾಹಿತಿ ಪಡೆದು ಮಾತನಾಡಿದರು.

ತಾಲೂಕಿನ 21 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲೂ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ಜನರ ಆರೋಗ್ಯ ಸುರಕ್ಷತೆ, ಉದ್ಯೋಗ ಖಾತ್ರಿ ಯೋಜನೆಗಳಡಿ ಕಾಮಗಾರಿಗಳು, ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ವಾಹನಗಳಿಗೆ ಮಹಿಳಾ ಚಾಲಕರ ನೇಮಕ ಹಾಗೂ ಅವರಲ್ಲಿನ ಕೌಶಲ ತರಬೇತಿ ಪರೀಕ್ಷೆಗಳನ್ನು ನಡೆಸಬೇಕು. ಇನ್ನು ಬೇರೆ ಜಿಲ್ಲೆಗಳಲ್ಲಿ ಸರ್ಕಾರದ ರೈತ ಕ್ರಿಯಾ ಯೋಜನೆಗಳು ಸಾಕಷ್ಟು ಯಶಸ್ಸು ಕಂಡಿದೆ. ಆದರೂ ಜಿಲ್ಲೆಯಲ್ಲಿ ಈಗಲೂ ಒಂದೇ ಸಂಸ್ಕೃತಿಯ ಕೃಷಿಗೆ ರೈತರು ಒಗ್ಗಿಕೊಂಡಿದ್ದಾರೆ. ಹೀಗಾಗಿ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ತೋಟಗಾರಿಕಾ ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಲು ಜಾಗೃತಿ ಸಪ್ತಾಹ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಗ್ರಾಮೀಣ ಜನರ ಪ್ರತಿ ಮನೆಗಳಿಗೂ ಕಸದ ಬುಟ್ಟಿ ವಿತರಣೆ ಮಾಡುವ ಜತೆಗೆ ತ್ಯಾಜ್ಯ ಬೇರ್ಪಡಿಸುವ ಮೂಲಕ ಎಲ್ಲೆಂದರಲ್ಲಿ ಬಿಸಾಡದೆ ನಿಗದಿತ ಸಮಯ 7.30ರ ಒಳಗಾಗಿ ಗ್ರಾಪಂನ ಕಸ ಸಂಗ್ರಹಿಸುವ ವಾಹನಗಳಿಗೆ ಹಾಕುವಂತೆ ಗ್ರಾಪಂನ ಅಧಿಕಾರಿ-ಸಿಬ್ಬಂದಿ ಕಡ್ಡಾಯವಾಗಿ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಬೇಸಿಗೆ ಹಿನ್ನೆಲೆ ಜನ-ಜಾನುವಾರುಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಗೆ ಕ್ರಮವಹಿಸಬೇಕು. ಸಾಧ್ಯವಾದಷ್ಟು ನೀರಿಗೆ ಸಮಸ್ಯೆ ಎದುರಾಗುವ ಗ್ರಾಮಗಳನ್ನು ಪಟ್ಟಿ ಮಾಡಬೇಕು. ಇನ್ನು ಆರೋಗ್ಯ ಇಲಾಖೆ ಈ ಸಮಯದಲ್ಲಿ ಜನರಲ್ಲಿ ಎದುರಾಗುವ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಂಡು ಆಶಾ ಮತ್ತು ಅಂಗನವಾಡಿ ಸದಸ್ಯರಿಂದ ಜಾಗೃತಿ ಮೂಡಿಸಬೇಕು. ಸರ್ಕಾರದಿಂದ ಪೂರೈಸುವ ಸೌಲಭ್ಯಗಳು ಜನರಿಗೆ ತಲುಪಲು ಎಲ್ಲ ಇಲಾಖೆ ಅಧಿಕಾರಿ-ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ತಾಲೂಕು ಯೋಜನಾಧಿಕಾರಿ ತ್ರಿವೇಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ.ಮಹೇಶ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ, ತಾಲೂಕು ಪಶು ವೈದ್ಯಾಧಿಕಾರಿ ಡಾ.ಸುರೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಪಿ.ಮಾರುತಿ, 21 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net