ಅಧಿಕ ಮಾಸದ ಕೊನೆಯ ಶನಿವಾರ; ಶಿಕಾರಿಪುರದ ಹುಚ್ಚರಾಯ ಸ್ವಾಮಿ ದರ್ಶನಕ್ಕೆ ಭಕ್ತರ ದಂಡು

12 ಎಸ್ಕೆಪಿ 2
ಶ್ರೀ ಹುಚ್ಚರಾಯಸ್ವಾಮಿ ಯ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತ ಭಕ್ತರು.
Published on

ಶಿಕಾರಿಪುರ: ನಿರೀಕ್ಷೆಯಂತೆಯೇ ಅಧಿಕ ಮಾಸದ ಕಡೇ ಶನಿವಾರ ಭಕ್ತರು ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿ ದರ್ಶನಕ್ಕೆ ಕಳೆದ ವಾರಕ್ಕಿಂತ ದುಪ್ಪಟ್ಟು ಸಂಖ್ಯೆಯಲ್ಲಿ ಸೇರಿದ್ದರು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಮುಂಜಾನೆಯಿಂದಲೇ ಭಕ್ತರ ದಂಡು ಸ್ವಾಮಿಯ ದರ್ಶನಕ್ಕೆ ಆಗಮಿಸಿತು.

ಶ್ರೀ ಸೀತಾರಾಮಚಂದ್ರ, ಮಹಾಗಣಪತಿಗೆ ಹಾಗೂ ಹುಚ್ಚರಾಯಸ್ವಾಮಿಗೆ ವಿಶೇಷವಾದ ಹೂವಿನ ಅಲಂಕಾರ ಮಾಡಲಾಗಿತ್ತು. ರುದ್ರಾಭಿಷೇಕ, ರಾಮರಕ್ಷಾ ಸ್ತೋತ್ರ, ವಿಷ್ಣು ಸಹಸ್ರನಾಮ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಸಾಂಗವಾಗಿ ನೆರವೇರಿದವು. ಇಡೀ ದೇಗುಲ ಹೂಗಳಿಂದ ಕಂಗೊಳಿಸುತ್ತಿತ್ತು.
ಭಕ್ತರ ಸಾಲು ಶ್ರೀ ಭ್ರಾಂತೇಶ ಭವನ ದಾಟಿತ್ತು. ಶಿಕಾರಿಪುರದ ತೇರುಬೀದಿ ಜಾತ್ರೆಯಂತೆ ನಳನಳಿಸುತ್ತಿತ್ತು. ಸಿಹಿಖಾದ್ಯದ ಜತೆಗೆ ರುಚಿಯಾದ ಅನ್ನದಾಸೋಹವನ್ನು ಭಕ್ತರಿಗಾಗಿ ರೈಸ್ ಮಿಲ್ ಮಾಲೀಕರು ಹಾಗೂ ವರ್ತಕರ ಸಂಘ ಏರ್ಪಡಿಸಿತ್ತು. ಮುಂಜಾನೆ ಭಕ್ತರಿಗೆ ಉಪ್ಪಿಟ್ಟು, ಕೇಸರಿಬಾತ್ ವಿತರಿಸಲಾಯಿತು. ಮಧ್ಯಾಹ್ನ ಬೂಂದಿ, ಚಿತ್ರಾನ್ನ, ಪಾಯಸ, ಪಲ್ಯ ಸೇರಿದಂತೆ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಭಕ್ತರಿಗೆ ಅಚ್ಚುಕಟ್ಟಾಗಿ ನೀರಿನ ವ್ಯವಸ್ಥೆ ಕೂಡಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ನಡೆಯಬೇಕಿದ್ದ ವಾರದ ಸಂತೆಯನ್ನು ಗುರುವಾರವೇ ನಡೆಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net