ಸ್ವಾತಂತ್ರ್ಯ ಹೋರಾಟದ ಕೊನೆಯ ಕೊಂಡಿ ಮೀರಾತಾಯಿ ಕೊಪ್ಪಿಕರ್‌ : ಸಚಿವ ಗೋವಿಂದ ಕಾರಜೋಳರಿಂದ ಶ್ರದ್ಧಾಂಜಲಿ

MDL-27-1
ಮುಧೋಳ ನಗರದ ವಾತ್ಸಲ್ಯಧಾಮದಲ್ಲಿ ಮೀರಾತಾಯಿ ಕೊಪ್ಪಿಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಚಿವ ಗೋವಿಂದ ಕಾರಜೋಳ, ಹನುಮಂತ ತುಳಸಿಗೇರಿ, ರಮೇಶ ಬಯ್ಯ, ಕುಮಾರ ಹುಲಕುಂದ, ಅನಂತದಾದಾ ಘೋರ್ಪಡೆ ಇತರರಿದ್ದರು.
Published on

ಮುಧೋಳ: ಮಹಾತ್ಮ ಗಾಂಧೀಜಿ ಆದರ್ಶಗಳು, ತತ್ವಗಳನ್ನು ಅನ್ವರ್ಥಕವಾಗುವಂತೆ ಪರಿಪಾಲಿಸಿಕೊಂಡು ಬಂದ ವಾತ್ಸಲ್ಯಮಯಿ, ಮಾತೋಶ್ರೀ ಮೀರಾತಾಯಿ ಕೊಪ್ಪಿಕರ್ ತಮ್ಮ ಇಹಲೋಕ ಯಾತ್ರೆ ಮುಗಿಸಿರುವುದು ಸ್ವಾತಂತ್ರ್ಯ ಹೋರಾಟದ ಕೊನೆಯ ಕೊಂಡಿ ಕಳಚಿದಂತಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದ ಮಹಾಲಿಂಗಪುರ ರಸ್ತೆಯಲ್ಲಿರುವ ವಾತ್ಸಲ್ಯಧಾಮಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಇತ್ತೀಚೆಗೆ ಅಗಲಿದ ಮೀರಾತಾಯಿ ಕೊಪ್ಪಿಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

ಕೊಪ್ಪಿಕರ್ ಅವರು ಆಶ್ರಮದಲ್ಲಿ ಸರಳ ಜೀವನ ಸಾಗಿಸುತ್ತಿದ್ದರು. ಭೂದಾನ ಚಳವಳಿಯ ನೇತಾರ ವಿನೋಬಾ ಭಾವೆ ಅವರ ತಾಯಿ ರುಕ್ಮಿಣಿದೇವಿಯವರ ಸ್ಮರಣೆಯಲ್ಲಿ ಈ ವಾತ್ಸಲ್ಯಧಾಮ ಆಶ್ರಮದ ಉದ್ಘಾಟನೆಯಾಗಿತ್ತು. ಮುಧೋಳ ತಾಲೂಕಿನ ನನ್ನ ಸ್ವಕ್ಷೇತ್ರದ ಈ ಆಶ್ರಮದಲ್ಲಿ ಮೀರಾತಾಯಿ ಅವರು ಸಾರ್ಥಕ ಬದುಕು ನಡೆಸುತ್ತಿದ್ದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡಿದ್ದ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ನೀಡಿದ್ದ ಒಂದು ಲಕ್ಷ ರೂ. ಮೊತ್ತದ ಚೆಕ್‌ನ್ನು ಮೀರಾತಾಯಿ ನಿರಾಕರಿಸಿದ್ದರು. ಮುಖ್ಯಮಂತ್ರಿಗಳ ಆಗ್ರಹದ ಮೇರೆಗೆ ಈ ಚೆಕ್‌ನ್ನು ಸ್ವೀಕರಿಸಿದ ಅವರು ಬಡವರಿಗಾಗಿ ಆ ಹಣವನ್ನು ಉಪಯೋಗಿಸಿದರು.

ವಾತ್ಸಲ್ಯಧಾಮದಲ್ಲಿ ಶ್ರೀಕೃಷ್ಣ ಮಂದಿರ, ಹನುಮಾನ ಮಂದಿರ, ಶಿವಲಿಂಗ, ನಾಗದೇವತೆ, ಗೋಶಾಲೆ ಮುಂತಾದವುಗಳ ಜೊತೆಗೆ ಜೀವನ ಸಾಗಿಸುತ್ತಿದ್ದ ಅವರು ಆಶ್ರಮದ 15-20 ಸಾಧಕರು ಉಂಡುಟ್ಟು ಸಂತೃಪ್ತ ಜೀವನ ನಡೆಸುವುದಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು.

ಜ್ಞಾನವೃದ್ಧ ಸೇವಾನಂದ ಸ್ವಾಮೀಜಿಗಳ ನೆರಳಿನಂತೆ ಸೇವೆಯನ್ನೇ ಬದುಕನ್ನಾಗಿ ಸ್ವೀಕರಿಸಿದ್ದ ಮೀರಾತಾಯಿ ಅವರ ನಿಧನದಿಂದ ನಮ್ಮ ನಾಡು ಬಡವಾಗಿದೆ. ದಯಾಗುಣನಾದ ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತ ತುಳಸಿಗೇರಿ, ವಾತ್ಸಲ್ಯಧಾಮದ ರಮೇಶ ಬಯ್ಯ, ಕುಮಾರ ಹುಲಕುಂದ, ಅನಂತದಾದಾ ಘೋರ್ಪಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net