

ಮದ್ದೂರು: ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಶಿವನ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ತಾಲೂಕಿನ ವೈದ್ಯನಾಥಪುರ ಗ್ರಾಮದ ಶ್ರೀ ವೈದ್ಯನಾಥೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿದವು. ಭಕ್ತರು ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 9 ಗಂಟೆಗೆ ಸಾಮೂಹಿಕ ರುದ್ರ ಹೋಮ, 10 ಗಂಟೆಗೆ ಸಾಮೂಹಿಕ ರುದ್ರಾಭಿಷೇಕ, ಸಂಜೆ 6 ಗಂಟೆಗೆ ಕಾರ್ತಿಕ ದೀಪೋತ್ಸವ ಹಮಿಕೊಳ್ಳಲಾಗಿತ್ತು. ಸಂಜೆ 6 ಗಂಟೆಗೆ ದೇವಸ್ಥಾನದ ಪ್ರಕಾರದಲ್ಲಿ ದೀಪೋತ್ಸವ ಮತ್ತು ದೇವರ ಉತ್ಸವ ನೆರವೇರಿತು. 6.30ಕ್ಕೆ ಮಹಾಮಂಗಳಾರತಿ ಮಾಡಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಶಂಕರ ಸಭಾದ ಅಧ್ಯಕ್ಷ ಗುರುಸ್ವಾಮಿ, ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರ ರಾವ್ ಇದ್ದರು.
ಸೋಮನಹಳ್ಳಿ ಗ್ರಾಮದ ಶ್ರೀ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿವಿಧ ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀ ಮಲೆ ಮಹದೇಶ್ವರ ದೇಗುಲದ ಅಧ್ಯಕ್ಷ ಯೋಗರಾಜು, ಖಜಾಂಚಿ ರಮೇಶ್, ಸದಸ್ಯರಾದ ಶಂಕರ್, ಸತೀಶ್, ಯುವ ಮುಖಂಡರಾದ ಶಶಿಕಾಂತ್, ಎಸ್.ಪ್ರವೀಣ್ ಇದ್ದರು. ರಾಂಪುರ ಗ್ರಾಮದ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ದೇಗುಲದ ಪ್ರಧಾನ ಅರ್ಚಕ ಚೌಡಯ್ಯ ದಿಕ್ಷೀತ್ ಇದ್ದರು.