

ಕುಣಿಗಲ್: 2023ರ ವಿಧಾನ ಸಭೆ ಚುನಾವಣೆ ನಮ್ಮ ಪಾಲಿಗೆ ಕೊನೆಯ ಚುನಾವಣೆಯಾಗಿದ್ದು, ರಾಜ್ಯದಲ್ಲಿ ಎಚ್. ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಹುತ್ರಿದುರ್ಗ ಹೋಬಳಿ ಅಂಚೇಪಾಳ್ಯ ಬಳಿ ತಾಲೂಕು ಜೆಡಿಎಸ್ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಎಚ್. ಡಿ.ದೇವೇಗೌಡರಿಗೆ ವಯಸ್ಸಾಗಿದೆ. ಅವರು ಮೂರು ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಇದು ಕಾರ್ಯಕರ್ತರ ಗೊಂದಲಕ್ಕೆ ಕಾರಣವಾಗಿದೆ. 2023ರ ವಿಧಾನಸಭೆ ಚುನಾವಣೆ ನಮ್ಮ ಪಾಲಿಗೆ ಕೊನೆಯ ಚುನಾವಣೆ ಆಗಲಿದೆ. ಹಾಗಾಗಿ ರಾಜ್ಯದಲ್ಲಿ ಜೆಡಿಎಸ್‌ನ ಹೊಸ ಅಧ್ಯಯ ಪ್ರಾರಂಭವಾಗಬೇಕು ಎಂದು ತಿಳಿಸಿದರು.
ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲ: 2023ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ರಾಜ್ಯದ ಎಲ್ಲ ಕಡೆ ಚರ್ಚೆ ಪ್ರಾರಂಭವಾಗಿದೆ. ಹಾಗಾಗಿ ಜೆಡಿಎಸ್ ಅನ್ನು ನಂಬರ್ ಒನ್ ಸ್ಥಾನಕ್ಕೆ ತರಬೇಕೆಂಬ ಗುರಿ ಇಟ್ಟುಕೊಂಡು ಕಾರ್ಯಕರ್ತರು ಕೆಲಸ ಮಾಡಬೇಕು. ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ನಮ್ಮ ಪಕ್ಷದ ಶಕ್ತಿ ಏನೆಂಬುದನ್ನು ಕಾರ್ಯಕರ್ತರು ತೋರಿಸಿದ್ದಾರೆ ಎಂದು ಹೇಳಿದರು.
ರಾಜಕೀಯ ಷಡ್ಯಂತ್ರದಿಂದ ಎಚ್‌ಡಿಡಿ ಸೋಲು: ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಎಚ್.ಡಿ.ದೇವೆಗೌಡರು ಸ್ಪರ್ಧೆ ಮಾಡಿದ್ದರು. ಆದರೆ ರಾಜಕೀಯ ಷಡ್ಯಂತ್ರ ಹಾಗೂ ಒಳಸಂಚಿನಿಂದ ಇಳಿ ವಯಸ್ಸಿನಲ್ಲಿ ದೇವೇಗೌಡರನ್ನು ಸೋಲಿಸಿದರು. ಇದಕ್ಕೆ ತಕ್ಕ ಉತ್ತರ ಕೋಡಬೇಕೆಂದರೆ ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರು ಮನೆಯಿಂದ ಹೊರ ಬಂದು ಪಕ್ಷಕ್ಕಾಗಿ ದುಡುಕಿಯುಬೇಕೆಂದು ತಿಳಿಸಿದರು.
26 ರಿಂದ ಪಂಚರತ್ನ ರಥ ಪ್ರಾರಂಭ: ಮಳೆ ಕಾರಣದಿಂದ ಮುಂದೂಡಲ್ಪಟ್ಟಿದ್ದ ಪಂಚರತ್ನ ರಥ ಯಾತ್ರೆ ಸೆ. 29ರಿಂದ ಪ್ರಾರಂಭವಾಗಲಿದ್ದು, ಪ್ರಥಮ ಹಂತದಲ್ಲಿ ರಾಜ್ಯದ ನೂರು ಕ್ಷೇತ್ರದಲ್ಲಿ ಪ್ರವಾಸ ಮಾಡಿ ಪಂಚರತ್ನ ಯೋಜನೆ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು ಎಂದರು.