

ಮಡಿಕೇರಿ: ತೀವ್ರತರವಾದ ಮತ್ತು ಪರಿಣಾಮಕಾರಿ ಮಿಷನ್ ಇಂದ್ರಧನುಷ್ ೫.೦ ಅಭಿಯಾನದಲ್ಲಿ ೫ ವರ್ಷದೊಳಗಿನ ಮಕ್ಕಳಿಗೆ ಮತ್ತು ಗರ್ಭಿಣೀಯರಿಗೆ ಲಸಿಕಾ ಡೋಸ್‌ಗಳನ್ನು ತಲುಪಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತೀವ್ರತರವಾದ ಮಿಷನ್ ಇಂದ್ರಧನುಷ್ ೫.೦ ದಡಾರ-ರುಬೆಲ್ಲಾ ನಿರ್ಮೂಲನೆ ಸಂಬಂಧಿಸಿದಂತೆ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.
ವಿವಿಧ ಕಾರಣಗಳಿಂದ ಬಿಟ್ಟು ಹೋಗಿರುವ ೫ ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣೀಯರಿಗೆ ಮಿಷನ್ ಇಂದ್ರಧನುಷ್ ೫.೦ ದಡಾರ-ರುಬೆಲ್ಲಾ ನಿರ್ಮೂಲನೆ ಮಾಡಲು ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಆ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದರು.
ಮಿಷನ್ ಇಂದ್ರಧನುಷ್ ಕಾರ್ಯಕ್ರಮ ಸಂಬಂಧಿಸಿದಂತೆ ವಿಶೇಷವಾಗಿ ದಡಾರ ಮತ್ತು ರುಬೆಲ್ಲಾ ರೋಗ ನಿರೋಧಕತೆಯ ಅಂತರ ಕಡಿಮೆ ಮಾಡುವುದು. ಇದುವರೆಗೆ ಲಸಿಕೆ ಡೋಸ್ ಪಡೆಯದಿದ್ದಲ್ಲಿ ಲಸಿಕೆಯನ್ನು ತಲುಪಿಸುವುದು. ಲಸಿಕೆ ಪಡೆದಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು. ಹಾಗು ಹೊಸ ಲಸಿಕೆಗಳ ಲಸಿಕಾ ಪ್ರಗತಿಯನ್ನು ಹೆಚ್ಚಿಸುವುದು ಪ್ರಮುಖ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮ ಅನುಷ್ಠಾನಕ್ಕೆ ಮುಂದಾಗಬೇಕು. ವಲಸಿಗ ೫ ವರ್ಷದೊಳಗಿನ ಮಕ್ಕಳು, ಗರ್ಭಿಣೀಯರನ್ನು ಪತ್ತೆ ಹಚ್ಚಿ ಅರ್ಹರಿಗೆ ಲಸಿಕೆ ನೀಡುವಂತಾಗಬೇಕು. ತಾಲೂಕುವಾರು ಮಾಹಿತಿಯನ್ನು ನಿಖರವಾಗಿ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಮಾತನಾಡಿ, ಮಿಷನ್ ಇಂದ್ರಧನುಷ್ ಅನುಷ್ಠಾನ ಸಂಬಂಧಿಸಿದಂತೆ ಆ.೭ ರಂದು ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಆ.೭ ರಿಂದ ೧೨ ರವರೆಗೆ ಮೊದಲ ಸುತ್ತು, ಸೆ.೧೧ ರಿಂದ ೧೬ ರವರೆಗೆ ಎರಡನೇ ಸುತ್ತು ಮತ್ತು ಅ.೯ ರಿಂದ ೧೪ ರವರೆಗೆ ಮೂರನೇ ಸುತ್ತಿನಲ್ಲಿ ಮಿಷನ್ ಇಂದ್ರಧನುಷ್ ಲಸಿಕಾಕರಣ ನಡೆಯಲಿದೆ. ಇಂದ್ರಧನುಷ್ ಲಸಿಕಾಕರಣಕ್ಕೆ ೨ ವರ್ಷದೊಳಗಿನ ೧,೧೬೯ ಮಕ್ಕಳು ಹಾಗೆಯೇ ೨ ರಿಂದ ೫ ವರ್ಷದೊಳಗಿನ ೨೩ ಮಕ್ಕಳಿಗೆ ಜತೆಗೆ ೨೭೮ ಗರ್ಭಿಣೀಯರಿಗೆ ಲಸಿಕಾ ಡೋಸ್ ನೀಡಲು ಬಾಕಿ ಇದೆ ಎಂದು ಡಾ.ಗೋಪಿನಾಥ್ ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗರ್ಭಿಣೀಯರು ಮತ್ತು ೫ ವರ್ಷದೊಳಗಿನ ಮಕ್ಕಳ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಅಧಿಕಾರಿ ಮತ್ತು ಆಶಾ ಕಾರ್ಯಕರ್ತರಿಗೆ ನೀಡುವಂತಾಗಬೇಕು. ಮನೆ ಮನೆಗೆ ಭೇಟಿ ಮಾಡಿ ಲಸಿಕೆ ಪಡೆಯಬೇಕಿರುವ, ಇದುವರೆಗೆ ಪಡೆಯದಿರುವ, ಹಾಗೆಯೇ ಬಿಟ್ಟು ಹೋಗಿರುವ ಪಟ್ಟಿ ಮಾಡಿ ಒದಗಿಸಬೇಕು. ವಿಶೇಷವಾಗಿ ೨ ರಿಂದ ೫ ವರ್ಷದೊಳಗಿನ ಮಕ್ಕಳು ದಡಾರ, ರುಬೆಲ್ಲಾ-೨, ಡಿಬಿಟಿ ಬೂಸ್ಟರ್, ಒಪಿವಿ ಬೂಸ್ಟರ್ ಪಡೆದಿದ್ದಾರೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಕೋರಿದರು.
ಮಿಷನ್ ಇಂದ್ರಧನುಷ್ ಐಎಂಐ ಕಾರ್ಯಕ್ರಮದಿಂದ ಸರ್ಕಾರ ಹೊಸ ಆ್ಯಪ್ ಯು-ವಿನ್ ಬಿಡುಗಡೆ ಮಾಡಿದ್ದು, ಇದರಲ್ಲಿ ನೋಂದಾಯಿಸಿಕೊಂಡು ಲಸಿಕೆ ಪಡೆದ ನಂತರ ಪ್ರಮಾಣ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಮಾತನಾಡಿ, ದಡಾರ ಮತ್ತು ರುಬೆಲ್ಲಾ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಲವು ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪರಿಣಾಮಕಾರಿ ಮಿಷನ್ ಇಂದ್ರಧನುಷ್ ೫.೦ ಅಭಿಯಾನ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರತಂದಿರುವ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಬಿಡುಗಡೆ ಮಾಡಿದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಳ್ಳಿಚಂಡ ಕಾರ್ಯಪ್ಪ, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಡಾ.ಆನಂದ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಸೌಮ್ಯ ಪೊನ್ನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜು, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜು, ಡಾ.ಚೇತನ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಸಪ್ಪ, ನಗರಸಭೆ ಎಂಜಿನಿಯರ್ ಸೌಮ್ಯ, ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ ಇತರರು ಇದ್ದರು.