ಜಿಲ್ಲೆಯಲ್ಲಿ ಒಂದೇ ದಿನ 1.25 ಲಕ್ಷ ಜನರಿಗೆ ಕರೊನಾ ಲಸಿಕೆ ಗುರಿ ; ನಾಳೆ ಲಸಿಕಾ ಮೆಗಾ ಮೇಳ

15Tmk_Vaccine_Mela
Published on

ತುಮಕೂರು : ಜಿಲ್ಲೆಯಲ್ಲಿ ಕರೊನಾ ಲಸಿಕೆ ಮೆಗಾ ಮೇಳವನ್ನು ಸೆ.17ರಂದು ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ 1.25ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಬುಧವಾರ ಕರೊನಾ ಲಸಿಕಾ ಮೆಗಾ ಮೇಳ ಹಿನ್ನೆಲೆಯ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಅಧಿಕಾರಿಗಳು ತಮ್ಮ ಎಲ್ಲ ಕಾರ್ಯಗಳನ್ನು ಬದಿಗೊತ್ತಿ ನಿಗದಿತ ಗುರಿ ಸಾಧಿಸುವ ಮೂಲಕ ಲಸಿಕಾ ಮೇಳ ಯಶಸ್ವಿಗೊಳಿಸಬೇಕು. ಬೇಜಾವಬ್ದಾರಿ ತೋರಿದ್ದೇ ಆದಲ್ಲಿ ನಿರ್ದಾಕ್ಷಣ್ಯ ಕ್ರಮ ಜರುಗಿಸುವುದಾಗಿ ಎಚ್ಚರಿದರು.

1.25 ಲಕ್ಷ ಡೋಸ್: ಲಸಿಕಾ ಮೇಳದಲ್ಲಿ ತುಮಕೂರು ತಾಲೂಕಿಗೆ 25000, ಶಿರಾ- 15000, ಮಧುಗಿರಿ-12000, ಪಾವಗಡ-10000, ಚಿ.ನಾ.ಹಳ್ಳಿ-12000, ತುರುವೇಕೆರೆ-10000, ಕುಣಿಗಲ್-10000, ಕೊರಟಗೆರೆ-10000 ಸೇರಿದಂತೆ ಜಿಲ್ಲೆಯಲ್ಲಿ 1.25 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿದೆ. ಆಯಾ ತಾಲೂಕು ಕಾರ್ಯಪಡೆಯು ಜವಾಬ್ದಾರಿ ಹೊತ್ತು ಲಸಿಕಾ ಮೇಳದಲ್ಲಿ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ವೈ.ಎಸ್.ಪಾಟೀಲ ತಿಳಿಸಿದರು.

ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಎಷ್ಟು ಲಸಿಕೆ ಹಾಗೂ ಕೇಂದ್ರಗಳಿವೆ ಎಂಬುದನ್ನು ನಿಖರ ಮಾಹಿತಿ ಒದಗಿಸಿ, ವಿಶ್ವವಿದ್ಯಾಲಯದಲ್ಲಿ ಬಾಕಿ ಉಳಿದಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಸೇರಿ ಎಲ್ಲ ವಿದ್ಯಾರ್ಥಿಗಳಿಗೆ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಹಾಕಿಸಬೇಕು. ಇದಕ್ಕೆ ಪೂರಕವಾದ ಲಸಿಕಾ ಕೇಂದ್ರ ತೆರೆಯಲು ವಿವಿ ಮುಖ್ಯಸ್ಥರಿಗೆ ಸೂಚಿಸಿದರು.

ಚುನಾವಣಾ ಮಾದರಿಯಲ್ಲಿಯೇ ಲಸಿಕಾ ಮೇಳ : ಚುನಾವಣಾ ಮಾದರಿಯಲ್ಲಿಯೇ ಲಸಿಕಾ ಮೇಳ ನಡೆಸಬೇಕು. ನಿಯೋಜಿತ ನೋಡಲ್ ಅಧಿಕಾರಿಗಳು ಮೇಳದಂದು ಬೆಳಗ್ಗೆ 6.30ರಿಂದ ಲಸಿಕಾಕರಣ ಆರಂಭಿಸಿ ಸಂಜೆ 7 ಗಂಟೆಯವರೆಗೂ ನಡೆಸಬೇಕು. ಈ ಮೇಳದಲ್ಲಿ ಗ್ರಾಮದಲ್ಲಿನ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಕ್ರಮವಹಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಎಲ್ಲ ಸಿಬ್ಬಂದಿ ಬಳಸಿಕೊಂಡು ಅಭಿಯಾನ ಯಶಸ್ವಿಗೊಳಿಸಬೇಕು. ಕೊಳಚೆ ಪ್ರದೇಶ, ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಲು ಆದ್ಯತೆ ನೀಡಬೇಕು ಎಂದು ವೈ.ಎಸ್.ಪಾಟೀಲ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಎಎಸ್ಪಿ ಟಿ.ಜೆ.ಉದೇಶ್, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಪಾಲಿಕೆ ಆಯುಕ್ತೆ ರೇಣುಕಾ, ಉಪವಿಭಾಗಾಧಿಕಾರಿ ವಿ.ಅಜಯ್ ಉಪಸ್ಥಿತರಿದ್ದರು.

ಟಾಂಟಾಂ ಹೊಡೆಸಿ : ಹೋಬಳಿವಾರು ನೋಡಲ್ ಅಧಿಕಾರಿಗಳು ಗ್ರಾಪಂಗಳ ಮಾಹಿತಿ ಆಧರಿಸಿ ಯೋಜನೆ ರೂಪಿಸಬೇಕು. ಲಸಿಕಾ ಮೇಳ ಪೂರ್ಣಗೊಳ್ಳುವವರೆಗೂ ಪಿಡಿಒಗಳು ಲಸಿಕಾ ತಂಡದ ಜತೆಯಲ್ಲಿರಬೇಕು. ಎಲ್ಲ ಅಧಿಕಾರಿಗಳು ಮೇಳದಲ್ಲಿ ಸಮನ್ವಯ ಸಾಧಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಇಂದಿನಿಂದಲೇ ಪಿಡಿಒಗಳು ಗ್ರಾಮಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಟಾಂಟಾಂ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ತಾಲೂಕು ಕಾರ್ಯಪಡೆಯು ಯೋಜನೆಯನ್ನು ರೂಪಿಸಿಕೊಂಡು ಮೇಳ ಯಶಸ್ವಿಗೊಳಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಹಿತಿ ಪಡೆದು ಲಸಿಕೆ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net