ಹಲ್ಲೆ ನಡೆಸಿದವರ ವಿರುದ್ಧ ಕ್ರಮ; ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿಕೆ

31102022 bellary m shivanna
Published on

ಬಳ್ಳಾರಿ: ನಗರದ 17ನೇ ವಾರ್ಡ್ ಹನುಮಾನ್ ನಗರದಲ್ಲಿ ಅ.19ರಂದು ಏಳು ಪೌರಕಾರ್ಮಿಕರ ಮೇಲೆ ಹಲ್ಲೆಯಾಗಿದೆ. ಅಧಿಕಾರಿಗಳ ಬೇಜಬ್ದಾರಿಯಿಂದ ಈ ಘಟನೆ ನಡೆದಿದೆ. ಕೃತ್ಯ ತಡೆಯುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕಿಡಿಕಾರಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಮಿಕರ ಮೇಲಿನ ಹಲ್ಲೆ ಖಂಡನೀಯ. ಇದರ ಹೊಣೆ ಪಾಲಿಕೆಯದು. ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಪಾಲಿಕೆ ಆರೋಗ್ಯಧಿಕಾರಿ ಇಲ್ಲ, ಒಬ್ಬ ಇಂಜಿನಿಯರ್ ಕೂಡ ಇಲ್ಲ. ಅಂದಿನ ಘಟನೆಯ ಮಾಹಿತಿ ಕೇಳಿರುವೆ. ತಪ್ಪಿತ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅಂದು ಹಲ್ಲೆ ಮಾಡಿದವರು ಪರಾರಿಯಾಗಿದ್ದಾರೆ. ಎಲ್ಲರನ್ನು ಬಂಧಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತರ ಮನೆಗಳಿಗೆ ತೆರಳಿ ಭೇಟಿ ಮಾಡಿ, ತಲಾ 25 ಸಾವಿರ ರೂ. ಪರಿಹಾರ ಧನ ನೀಡಿರುವೆ ಎಂದರು.

ರಾಜ್ಯದಲ್ಲಿ 52,200 ಪೌರಕಾರ್ಮಿಕರಿದ್ದಾರೆ. ಇದರಲ್ಲಿ 10 ಸಾವಿರ ಜನರು ಮಾತ್ರ ಕಾಯಂ. 11,133 ಜನರನ್ನು ರೋಸ್ಟರ್ ಪದ್ಧತಿಯಲ್ಲಿ ಕಾಯಂ ಮಾಡಿಕೊಳ್ಳುತ್ತಿದ್ದೇವೆ. ಉಳಿದವರನ್ನೂ ಶೀಘ್ರವೇ ಕಾಯಂ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ 544 ಯುಜಿಡಿ ಕಾರ್ಮಿಕರಿದ್ದು, ಇವರನ್ನು ಕಾಯಂ ಮಾಡಿಕೊಳ್ಳುವ ಆದೇಶ ಹೊರಬೀಳಲಿದೆ ಎಂದರು.

ಸಫಾಯಿ ಕಾರ್ಮಚಾರಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ, ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಪಾಲಿಕೆ ಆಯುಕ್ತ ರುದ್ರೇಶ್, ಎಎಸ್ಪಿ ನಟರಾಜನ್ ಇತರರಿದ್ದರು.

ಪೌರಕಾರ್ಮಿಕರಿಗೆ ಗುತ್ತಿಗೆದಾರರಿಂದ ಬರುವ ಹಣದಲ್ಲಿ ಬಹುತೇಕರಿಗೆ ಪಿಎಫ್ ಹಣ ಸಂದಾಯವಾಗುತ್ತಿಲ್ಲ ಎಂಬ ಮಾಹಿತಿ ಇದೆ. ಇದರಲ್ಲಿ ಭಾಗಿಯಾದ ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವೆ.
| ಎಂ.ಶಿವಣ್ಣ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net