

ಎನ್.ಆರ್.ಪುರ: ಡೆಂೆ ಜ್ವರದ ನಿಯಂತ್ರಣಕ್ಕೆ ಪ್ರತಿ ತಿಂಗಳ ಮೊದಲ ಶುಕ್ರವಾರ ಹಾಗೂ ಮೂರನೇ ಶುಕ್ರವಾರ ನಗರದ ಲಾರ್ವ ಸಮೀಕ್ಷೆ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿಜಯ ಕುಮಾರ್ ಹೇಳಿದರು.
ಸೋಮವಾರ ಪಟ್ಟಣದ ಪಂಪ್‌ಹೌಸ್ ಸಮೀಪದ ಕೆರೆಗೆ ಲಕ್ಕವಳ್ಳಿ ಸಮೀಪದ ಬಿಆರ್‌ಪಿ ಹಾಗೂ ಗಪ್ಪಿ ಗಂಬೋಸಿಯ ಸಾಕಾಣಿಕೆ ತೊಟ್ಟಿಯಿಂದ ತಂದ ಗಪ್ಪಿ, ಗಾಂಬೂಜಿಯ ಮೀನುಮರಿಗಳನ್ನು ಕೆರೆಗೆ ಬಿಡುವ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿದಿನ ಮನೆ, ಮನೆಗೆ ಭೇಟಿ ನೀಡಿ ಜ್ವರ ಸಮೀಕ್ಷೆ ಮಾಡಿ ಕರ ಪತ್ರಗಳನ್ನು ವಿತರಿಸಿಸುತ್ತಿದ್ದಾರೆ. ಲಾರ್ವ ಗುರುತಿಸಿ ಲಾರ್ವ ತಾಣಗಳನ್ನು ನಾಶ ಮಾಡಲಾಗುತ್ತದೆ. ಜೈವಿಕ ವಿಧಾನದ ಮೂಲಕ ಲಾರ್ವನಾಶಕ ಮೀನುಗಳಾದ ಗಪ್ಪಿ ಗಾಂಬೋಜಿಯಾ ಮೀನುಗಳನ್ನು ಪಟ್ಟಣ ಸಮೀಪದ ಮುಖ್ಯ ಕೆರೆಗಳಿಗೆ ಬಿಡುವ ಕಾರ್ಯಕ್ರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಸಚಿವರ ಆದೇಶದಂತೆ ಪ್ರತಿ ಶುಕ್ರವಾರ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ನೀರು ಶೇಖರಣೆ ತಾಣಗಳನ್ನು ಖಾಲಿ ಮಾಡಿ ನಂತರ ತೊಳೆದು ಎರಡು ಗಂಟೆ ಒಣಗಿಸಿ ಮತ್ತೆ ನೀರು ಶೇಖರಿಸಿ ಮುಚ್ಚಿಟ್ಟು ಬಳಸಬೇಕು. ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಘನ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಎಳನೀರು ಚಿಪ್ಪು, ಪ್ಲಾಸ್ಟಿಕ್ ಲೋಟ, ಹಳೆಯ ಪಾತ್ರೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮಾತನಾಡಿ, ಡೆಂೆ ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯವರು ಕೈಗೊಳ್ಳುತ್ತಿರುವ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಘನ ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಜನರು ತಮ್ಮ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಕಸ ಸಂಗ್ರಹಿಸುವ ವಾಹನಕ್ಕೆ ನೀಡಬೇಕು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಮುನಾವರ್ ಪಾಷಾ, ಮುಖ್ಯಾಧಿಕಾರಿ ಆರ್.ವಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ಎಂ.ದರ್ಶನಾಥ್, ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಪವನ್‌ಕರ್,ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಕೆ.ಭಗವಾನ್,ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೇಶವ ಮೂರ್ತಿ, ಆರ್.ನಾಗೇಂದ್ರಪ್ಪ, ಪಪಂ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಕುಮಾರ್, ವಾಟರ್‌ಮ್ಯಾನ್ ಸುರೇಶ್ ಇದ್ದರು.