ರಸ್ತೆ ಮಧ್ಯೆ ಸಿಲುಕಿದ ಬೃಹತ್ ಲಾರಿ

Large truck stuck in the middle of the road
Published on

ಗಜೇಂದ್ರಗಡ: ಸಮೀಪದ ಗೌಡಗೇರಿ ಗ್ರಾಮದ ಹತ್ತಿರದ ಚಿಕ್ಕಾಡಿ ಗುಡ್ಡದ ಬಳಿ ಗಜೇಂದ್ರಗಡ-ಇಳಕಲ್ಲ ರಸ್ತೆ ಮಧ್ಯದಲ್ಲಿ ಗಾಳಿ ವಿದ್ಯುತ್ ಯಂತ್ರದ ಫ್ಯಾನ್ ರೆಕ್ಕೆ ಸಾಗಿಸುತ್ತಿದ್ದ ಭಾರಿ ಗಾತ್ರದ ವಾಹನ ಸಿಲುಕಿಕೊಂಡಿದ್ದರಿಂದ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಸಂಚಾರಕ್ಕೆ ತೊಂದರೆ ಉಂಟಾಯಿತು.

ಇಳಕಲ್ಲ ಕಡೆಯಿಂದ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ಕಡೆಗೆ ಬೃಹತ್ ಗಾತ್ರದ ವಾಹನ ಗಾಳಿ ವಿದ್ಯುತ್ ಯಂತ್ರದ ಫ್ಯಾನ್ ರೆಕ್ಕೆ ಸಾಗಿಸುತ್ತಿತ್ತು. ಚಿಕ್ಕಾಡಿ ಗುಡ್ಡದ ಹತ್ತಿರದ ತಿರುವಿನಲ್ಲಿ ವಾಹನ ರಸ್ತೆ ಪಕ್ಕದಲ್ಲಿ ಕೆಸರಿನಲ್ಲಿ ಸಿಲುಕೊಂಡಿತ್ತು. ಎಷ್ಟೇ ಪ್ರಯತ್ನಪಟ್ಟರೂ ವಾಹನ ಕೆಸರಿನಿಂದ ಮೇಲೇಳಲಿಲ್ಲ. ಹೀಗಾಗಿ, ಕೆಲ ಸಮಯ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಬಳಿಕ ಪಕ್ಕದ ಖಾಸಗಿ ಜಮೀನಿನ ಮೂಲಕ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ತಾಲೂಕಿನಾದ್ಯಂತ ಪವನ ವಿದ್ಯುತ್ ಉತ್ಪಾದನೆ ಕಂಪನಿಗಳು ನೂರಾರು ಫ್ಯಾನ್ ಅಳವಡಿಸುತ್ತಿವೆ. ಅವುಗಳ ಬಿಡಿಭಾಗಗಳನ್ನು ಬೃಹತ್ ವಾಹನಗಳಲ್ಲಿ ಸಾಗಿಸುತ್ತಿರುವುದರಿಂದ ರಸ್ತೆಗಳು ಹಾಳಾಗುವ ಜತೆಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದರೂ, ಯಾವುದೇ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಇತ್ತ ಗಮನಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಗಜೇಂದ್ರಗಡ-ಇಲಕಲ್ಲ ರಸ್ತೆಯಲ್ಲಿ ಹಲವಾರು ದಿನಗಳಿಂದ ಭಾರಿ ಗಾತ್ರದ ವಾಹನಗಳು ಓಡಾಡುತ್ತಿವೆ. ಇದರ ಬಗ್ಗೆ ಪಿಎಸ್‌ಐ ಹಾಗೂ ಸಿಪಿಐಗಳಿಗೆ ತಿಳಿಸಿದರೂ ಪ್ರಯೋಜನವಾಗಲಿಲ್ಲ. ನಂತರ ನಮ್ಮ ಇಲಾಖೆಯಿಂದ ಬೃಹತ್ ವಾಹನಗಳ ಓಡಾಟದ ವಿರುದ್ಧ ಕ್ರಮ ಜರುಗಿಸಲು ಹೋದಾಗ ನಮ್ಮ ಮೇಲೆ ಹಲ್ಲೆಗಳಾಗಿವೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ತಿಳಿಸಿದರೂ ಸ್ಪಂದಿಸಿಲ್ಲ. ಸೋಮವಾರ ಘಟನೆ ನಡೆದ ಸ್ಥಳಕ್ಕೆ ನಮ್ಮ ಸಿಬ್ಬಂದಿ ಕಳುಹಿಸಲಾಗಿದೆ. ಲೋಕೋಪಯೋಗಿ ರಸ್ತೆಯಲ್ಲಿ ಬಂದ ವಾಹನದ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು. ಬಲವಂತ ನಾಯ್ಕರ, ಎಇಇ ಲೋಕೊಪಯೋಗಿ ಇಲಾಖೆ ರೋಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net