

ಮೈಸೂರು: ನಗರದ ಹೆಗ್ಗುರುತುಗಳಲ್ಲಿ ಒಂದಾಗ ಪಾರಂಪರಿಕ ದೊಡ್ಡಗಡಿಯಾರ(ಸಿಲ್ವರ್ ಜ್ಯುಬಿಲಿ ಕ್ಲಾಕ್ ಟವರ್) ಚಿತ್ರವನ್ನು ಅಂಚೆ ಇಲಾಖೆಯಿಂದ ಹೊರ ತರಲಾಗಿದೆ.
ಪ್ರವಾಸಿಗರನ್ನು ಆಕರ್ಷಿಸುವ ಶಾಶ್ವತ ಚಿತ್ರಾತ್ಮಕ ಮುದ್ರೆಗಳ ಅಡಿಯಲ್ಲಿ ಇಲಾಖೆ ಈ ಪಾರಂಪರಿಕ ದೊಡ್ಡಗಡಿಯಾರದ ಚಿತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ.
ಮೈಸೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಭಾರತೀಯ ಅಂಚೆ ಹೊರತಂದಿರುವ ಮೈಸೂರು ನಗರದ ದೊಡ್ಡ ಗಡಿಯಾರ (ಸಿಲ್ವರ್ ಜ್ಯುಬಿಲಿ ಕ್ಲಾಕ್ ಟವರ್)ದ ಶಾಶ್ವತ ಚಿತ್ರಾತ್ಮಕ ಮುದ್ರೆಯನ್ನು ಬಿಡುಗಡೆ ಮಾಡಿ ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ.ಹರೀಶ್ ಮಾತನಾಡಿ, ಶಾಶ್ವತ ಚಿತ್ರಾತ್ಮಕ ಮುದ್ರೆಗಳು ಪ್ರವಾಸಿಗರನ್ನು ಆಕರ್ಷಿಸುವ ಜತೆಗೆ ಆ ಸ್ಥಳದ ಪ್ರಾಮುಖ್ಯತೆಯನ್ನು ಜಗತ್ತಿಗೆ ಪ್ರಚುರಪಡಿಸುತ್ತವೆ ಎಂದು ಹೇಳಿದರು.
ದೊಡ್ಡ ಗಡಿಯಾರ ಮೈಸೂರಿನ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದ್ದು ನಗರದ ಹೆಗ್ಗುರುತಾಗಿದೆ. ಇದರಿಂದ ಇದರ ಮಹತ್ವ ಹಾಗೂ ಮೈಸೂರು ಪ್ರವಾಸಿ ತಾಣಗಳ ಪ್ರಚಾರ ದೇಶ, ವಿದೇಶಗಳಲ್ಲಿ ಅಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ಅಂಚೆ ವಿಭಾಗದ ಉಪ ಅಧೀಕ್ಷಕ ವಿ.ಎಲ್.ನವೀನ್ ಮಾತನಾಡಿ, ಇನ್ನೆರಡು ವರ್ಷಗಳಲ್ಲಿ ದೊಡ್ಡ ಗಡಿಯಾರ ನಿರ್ಮಾಣವಾಗಿ 100 ವರ್ಷಗಳಾಗಲಿದ್ದು, ಅಂಚೆ ಇಲಾಖೆ ವಿಶೇಷ ಲಕೋಟೆ ಅಥವಾ ಚಿತ್ರಿತ ಅಂಚೆ ಕಾರ್ಡ್ ಅನ್ನು ಹೊರತರುವ ಆಶಯವನ್ನು ಹೊಂದಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆ ಪಾಲಕ ಸೋಮಯ್ಯ, ದೊಡ್ಡ ಗಡಿಯಾರದ ಶಾಶ್ವತ ಚಿತ್ರಾತ್ಮಕ ಮುದ್ರೆ ಬಿಡುಗಡೆ ಮಾಡುವ ಮೂಲಕ ಅಂಚೆ ಇಲಾಖೆ ಅದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.
ಲಕ್ಷ್ಮೀಪುರಂ ಅಂಚೆ ಕಚೇರಿಯ ಪ್ರಭಾರ ಅಂಚೆ ಪಾಲಕ ಬಿ.ಮಹದೇವಸ್ವಾಮಿ, ಅಂಚೆ ಇಲಾಖೆ ಮಾರುಕಟ್ಟೆ ವ್ಯವಸ್ಥಾಪಕ ಡಾ. ಅಮ್ಮಸಂದ್ರ ಸುರೇಶ್ ಇತರರು ಇದ್ದರು.