ಬೆಂ.ಉತ್ತರ ವಿವಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​

27 KLR 06
ಬೆಂಗಳೂರು ಉತ್ತರ ವಿವಿಯಿಂದ ನಗರ ಹೊರವಲಯದ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ಸ್ನಾತಕೋತ್ತರ ವಿಭಾಗದ 341 ವಿದ್ಯಾರ್ಥಿಗಳಿಗೆ ವಿವಿಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಅವರು ಲ್ಯಾಪ್​ ಟಾಪ್​ ವಿತರಿಸಿದರು. ಆಡಳಿತ ಕುಲಸಚಿವ ಸಿ.ಎನ್​.ಶ್ರೀಧರ್​, ಮೌಲ್ಯಮಾಪನ ಕುಲಸಚಿವ ಡಾ.ಲೋಕನಾಥ್​, ಸಿಂಡಿಕೇಟ್​ ಸದಸ್ಯ ವೆಂಕಟೇಶಪ್ಪ ಇದ್ದರು.
Published on

ಅಗ್ಗದ ಬೆಲೆಗೆ ಮಾರಿಕೊಳ್ಳದೆ ಜೀವನ ರೂಪಿಸಿಕೊಳ್ಳಲು ಕುಲಪತಿ ಪ್ರೊ.ನಿರಂಜನ ವಾನಳ್ಳಿ ಸಲಹೆ

ಕೋಲಾರ: ವಿವಿಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರು ಉತ್ತರ ವಿವಿ ಜಾತಿ, ಧರ್ಮ, ಆರ್ಥಿಕ ಪರಿಸ್ಥಿತಿಯ ತಾರತಮ್ಯವಿಲ್ಲದೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ವಿತರಿಸುತ್ತಿದ್ದು, ಇದನ್ನು ಮಾರಿಕೊಳ್ಳದೆ ತವರುಮನೆ ಉಡುಗೊರೆ ಎಂದು ಭಾವಿಸಿ, ಇದರಿಂದಲೇ ಜೀವನ ರೂಪಿಸಿಕೊಳ್ಳಿ ಎಂದು ವಿವಿ ಕುಲಪತಿ ಪ್ರ್ರೊ.ನಿರಂಜನ ವಾನಳ್ಳಿ ಹೇಳಿದರು.

ನಗರ ಹೊರವಲಯದ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಸ್ನಾತಕೋತ್ತರ ವಿಭಾಗದ 341 ವಿದ್ಯಾರ್ಥಿಗಳಿಗೆ ಪ್ರಥಮ ಬಾರಿಗೆ ಲ್ಯಾಪ್​ಟಾಪ್​ ವಿತರಿಸಿ ಮಾತನಾಡಿ, ಸಾಮಾನ್ಯವಾಗಿ ಪಿಎಚ್​ಡಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ನೀಡುವುದು ವಾಡಿಕೆ. ಆದರೆ, ಬೆಂಗಳೂರು ಉತ್ತರ ವಿವಿಯಲ್ಲಿ ಮೊದಲ ಬಾರಿಗೆ ಪಿಜಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ವಿತರಿಸಿ ಕ್ರಾಂತಿ ಮಾಡಲಾಗಿದೆ ಎಂದರು.

ವಿವಿಯಿಂದ ನೀಡುತ್ತಿರುವ ಈ ಉಡುಗೊರೆ ಕೇವಲ ಲ್ಯಾಪ್​ಟಾಪ್​ ಎಂದು ಭಾವಿಸದಿರಿ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನೂ ಬದಲಿಸುವ ಸಾಧನವಾಗಬಹುದು. ನೀವು ಮುಂದೆ ಕುಟುಂಬ ನಿರ್ವಹಣೆಗೆ ಇದನ್ನೇ ಬಳಸಿ ಜೀವನದ ಅಗತ್ಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಆಡಳಿತ ಕುಲಸಚಿವ ಸಿ.ಎನ್​.ಶ್ರೀಧರ್​ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದುದು. ಇಲ್ಲಿ ನೀವು ಕಲಿಕೆ ಜತೆಗೆ ಬದುಕಿನ ಕೌಶಲ ರೂಪಿಸಿಕೊಳ್ಳಿ. ಸ್ನಾತಕೋತ್ತರ ಶಿಕ್ಷಣ ನಿಮ್ಮ ಮುಂದಿನ ಬದುಕಿಗೆ ಹಾದಿಯಾಗಲಿದೆ ಎಂದರು.

ಮೌಲ್ಯಮಾಪನ ಕುಲಸಚಿವ ಡಾ.ಲೋಕನಾಥ್​ ಮಾತನಾಡಿ, ಸ್ನಾತಕೋತ್ತರ ಪದವಿ ಮುಗಿಸಿ, ಜೀವನ ಕಟ್ಟಿಕೊಳ್ಳುವ ಹೊಸ್ತಿಲಲ್ಲಿ ಇರುವ ವಿದ್ಯಾರ್ಥಿಗಳಿಗೆ ಈ ಓದಿನ ನಂತರ ಮುಂದೇನು ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಅದಕ್ಕೆ ಎದೆಗುಂದದೇ ನಿಮ್ಮ ಬದುಕಿಗೆ ಆಧಾರ ಹುಡುಕಿಕೊಳ್ಳಬೇಕು. ಅದಕ್ಕೆ ನಮ್ಮ ಈ ಉಡುಗೊರೆ ನೆರವಾಗಲಿ ಎಂದು ಆಶಿಸಿದರು.

ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಉಪನ್ಯಾಸಕ ಡಾ. ಮಂಜುನಾಥ್​, ಪತ್ರಿಕೋದ್ಯಮ ವಿಭಾಗದ ಡಾ.ಓಹಿಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net