

ತಿ.ನರಸೀಪುರ: ರಾಜಕೀಯ ಒತ್ತಡಕ್ಕೆ ಸಿಲುಕಿರುವ ಅಧಿಕಾರಿಗಳ ನಡವಳಿಕೆಯಿಂದ ಬೇಸತ್ತು, ಅನಿವಾರ್ಯತೆಯನ್ನು ಅರಿತು ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ ಎಂದು ಬನ್ನೂರು ಪುರಸಭೆ ಅಧ್ಯಕ್ಷ ಕೃಷ್ಣೇಗೌಡ ತಿಳಿಸಿದರು.
ತಾಲೂಕಿನ ಬನ್ನೂರು ಪುರಸಭೆಯ ಸಿಡಿಎಸ್ ಸಭಾಂಗಣದಲ್ಲಿ ಶುಕ್ರವಾರ 2023-24 ಮತ್ತು 2024-25ನೇ ಸಾಲಿನ ಎಸ್.ಎಫ್.ಸಿ. ಅನುದಾನಡಿ(ಶೇ.7.25) ಪುರಸಭೆ ವ್ಯಾಪ್ತಿಯಲ್ಲಿನ ಎಸ್.ಸಿ, ಎಸ್.ಟಿ ಹಾಗೂ ಹಿಂದುಳಿದ ವರ್ಗಗಳ ಬಿ.ಇ.ಮತ್ತು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉನ್ನತ ವ್ಯಾಸಂಗ ಮಾಡುತ್ತಿರುವ ಬಡ, ಮಾಧ್ಯಮ ವರ್ಗದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಲು ಲ್ಯಾಪ್‌ಟಾಪ್ ಬಯಸಿ ಅರ್ಜಿ ಸಲ್ಲಿದ್ದರು. ಅದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಪುರಸಭೆ ಅನುದಾನದಲ್ಲಿ ನೀಡುತ್ತಿದ್ದೇವೆ ಎಂದರು.
ವಿತರಣೆ ಸಂಬಂಧ ಅಧಿಕಾರಿಗಳು ಗೊಂದಲ ಸೃಷ್ಟಿ ಮಾಡುವುದರ ಜತೆಗೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದರು. ಹಾಗಾಗಿ ಪುರಸಭೆ ಸದಸ್ಯರ ಜತೆಗೂಡಿ ನಾನೇ ಲ್ಯಾಪ್‌ಟಾಪ್ ವಿತರಣೆ ಮಾಡುವ ಕೆಲಸ ಮಾಡಬೇಕಾಯಿತು.
ಲ್ಯಾಪ್‌ಟಾಪ್‌ಗಳನ್ನು ವಿತರಣೆಗೆಂದು ಕಚೇರಿಗೆ ತಂದು ಬಂದು ಮೂರು ತಿಂಗಳು ಕಳೆದಿವೆ. ಕಳೆದ ಸಭೆಯಲ್ಲಿ ಪುರಸಭೆಯ 23 ಸದಸ್ಯರು ಸೇರಿ ಜೂನ್‌ನಲ್ಲಿ ಲ್ಯಾಪ್‌ಟಾಪ್ ವಿತರಣೆ ಮಾಡಲು ತೀರ್ಮಾನಿಸಲಾಗಿತ್ತು. ಅದರಂತೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನೂ ನೀಡಲಾಯಿತು. ವಿದ್ಯಾರ್ಥಿಗಳು ಕಾಲೇಜಿಗೆ ರಜೆ ಹಾಕಿ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಮುಖ್ಯಾಧಿಕಾರಿಗಳು ಕಾರ್ಯಕ್ರಮ ಆಯೋಜಿಸಲಿಲ್ಲ. ಕಾರ್ಯಕ್ರಮವನ್ನು ಯಾವ ಕಾರಣಕ್ಕೆ ರದ್ದು ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡದೆ ವಿದ್ಯಾರ್ಥಿಗಳಿಗೆ ಉಂಟು ಮಾಡಿದ್ದರು. ಈ ಬಗ್ಗೆ ಮುಖ್ಯಾಧಿಕಾರಿಗಳಿಗೆ ಕಾರಣ ಕೇಳಿದ್ದೆ ಅದಕ್ಕೆ ಅವರು ಸ್ಥಳೀಯ ಸಚಿವರ ಸಮಯ ತೆಗೆದುಕೊಂಡು ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದು ಹೇಳಿದ್ದರು. ಆದರೆ ಆ ಕೆಲಸವನ್ನು ಮುಖ್ಯಾಧಿಕಾರಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡುವುದು ನನ್ನ ವ್ಯಾಪ್ತಿಗೆ ಬರುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರಿಗೆ ಲ್ಯಾಪ್‌ಟಾಪ್ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಅಧಿಕಾರ ಕಸಿಯಲು ಯತ್ನಿಸಿದವರಿಗೆ ತಕ್ಕ ಉತ್ತರ ನೀಡುತ್ತೇನೆ ಹಾಗೂ ಪುರಸಭೆಯಲ್ಲಿ ನೆಡದಿರುವ ಅಕ್ರಮ ವ್ಯವಹಾರವನ್ನು ಜನರ ಮುಂದೆ ಬಿಚ್ಚಿಡುತ್ತೇನೆ ಎಂದು ಕೃಷ್ಣೇಗೌಡ ಎಚ್ಚರಿಸಿದರು.
ಉಪಾಧ್ಯಕ್ಷೆ ಎಂ.ಆರ್.ಸೌಮ್ಯರಾಣಿ, ಸದಸ್ಯರಾದ ಬಿ.ಕೆ.ಆನಂದ್, ಚಲುವರಾಜು, ನಂಜುಂಡಸ್ವಾಮಿ, ವಿಜಯಕುಮಾರ್, ಮಹೇಶ್, ಶೋಭಾ ಸತೀಶ್, ಸುರೇಶ್, ಲೋಕಾಂಬಿಕಾ, ದಿವ್ಯಾಪೈ.ಚಂದ್ರು, ಶಿವಣ್ಣ, ಮುಖಂಡ ಪ್ರಭಾಕರ್ ವ್ಯವಸ್ಥಾಪಕಿ ವಿನುತಾ, ಸಮುದಾಯ ಸಂಘಟಕ ಅಧಿಕಾರಿ ಕುಮಾರ್ ಹಾಗೂ ಇತರರಿದ್ದರು.