

ಬೇಲೂರು : ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುವ ಉದ್ದೇಶದಿಂದ ಉಚಿತ ಲ್ಯಾಪ್‌ಟಾಪ್ ವಿತರಿಸಿ ಪ್ರೋತ್ಸಾಹಿಸುತಿದ್ದು, ವಿದ್ಯಾರ್ಥಿಗಳು ಇದರ ಸದೂಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸರ್ಕಾರ ಭವಿಷ್ಯದ ದೃಷ್ಟಿಯಿಂದ ಲ್ಯಾಪ್‌ಟಾಪ್ ನೀಡುತ್ತಿದೆ. ಲ್ಯಾಪ್‌ಟಾಪ್‌ನ ಮೂಲಕ ಉನ್ನತ ಶಿಕ್ಷಣ ಪಡೆಯುವ ಪಡೆದು ಸಾಧನೆ ಮಾಡಬೇಕು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಗಳು ಸನ್ನಿಹಿತವಾಗುತ್ತಿದೆ. ಮಕ್ಕಳು ಚೆನ್ನಾಗಿ ಓದಿಕೊಳ್ಳಬೇಕು. ಲ್ಯಾಪ್‌ಟ್ಯಾಪ್ ಬಡ ವರ್ಗದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಲಿದೆ. ಸರ್ಕಾರದ ಯೋಜನೆಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಕಾರ್ಮಿಕರು ಕಷ್ಟಪಟ್ಟು ಜೀವನ ಮಾಡುತ್ತಾರೆ. ಅವರ ಮಕ್ಕಳು ಓದಿ ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು. ಎನೇ ಸಮಸ್ಯೆ ಇದ್ದರೂ ಹೇಳಿ ಕೊಳ್ಳಬಹುದು. ಎಲ್ಲರಿಗೂ ಕಾರ್ಮಿಕ ಕೆಲಸ ಮಾಡಲು ಸಾದ್ಯವಿಲ್ಲ ಸುಂದರವಾದ ಕಟ್ಟಡ ಕಟ್ಟಲು ಸಾಧ್ಯವಿಲ್ಲ. ಕಾರ್ಮಿಕರಿಗೆ ಮತ್ತು ಅವರ ಮಕ್ಕಳ ಶಿಕ್ಷಣಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಪಂ ಇಒ ಸತೀಶ್, ಕಾರ್ಮಿಕ ಇಲಾಖೆ ಅಧಿಕಾರಿ ಯಮುನಾ, ತಾಲೂಕು ಅಧಿಕಾರಿ ವಿಜಯ್ ಕುಮಾರ್, ಪುರಸಭೆ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಅಹಮದ್ ಅಲಿಖಾನ್, ಮುಖಂಡ ಶರೀಫ್ ಇತರರಿದ್ದರು.