

ಮೈಸೂರು: ಶತಮಾನದ ಇತಿಹಾಸ ಹೊಂದಿರುವ ನಗರದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡಗಳನ್ನು ಉಳಿಸಲು ನಡೆಯುತ್ತಿರುವ ಹೋರಾಟಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಮೊದಲ ಹಂತದ ಗೆಲುವು ದೊರೆತ್ತಿದೆ.
ಈ ಎರಡು ಕಟ್ಟಡಗಳು ಸಂಪೂರ್ಣ ದುಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಕುರಿತು ನಗರದ ಗೌರಿಸತ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಪಾರಂಪರಿಕ ತಜ್ಞರ ಅಭಿಪ್ರಾಯ ಪಡೆಯದೆ ಅಧಿಕಾರಿಗಳು ಹಾಗೂ ಸಿವಿಲ್ ಇಂಜಿನಿಯರ್‌ಗಳ ಅಭಿಪ್ರಾಯವನ್ನು ಮಾತ್ರ ಪಡೆದು ಪಾರಂಪರಿಕ ಕಟ್ಟಡವನ್ನು ನೆಲಸಮ ಮಾಡಲು ಸರ್ಕಾರ ನಿರ್ಧರಿಸಿರುವ ಕ್ರಮ ಸರಿ ಇಲ್ಲ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ಗೌರಿಸತ್ಯ ಅವರು ಸುಪ್ರೀಂಕೋರ್ಟ್‌ನಲ್ಲಿ ಗಮನ ಸೆಳೆದರು.
ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರಾಗಿರುವ ಪ್ರೊ.ಎನ್.ಎಸ್. ರಂಗರಾಜು ಹಾಗೂ ಇತರರು ಕಟ್ಟಡವನ್ನು ನೆಲಸಮಗೊಳಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈ ಅಂಶವನ್ನು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿರಲಿಲ್ಲ. ತಜ್ಞರ ಅಭಿಪ್ರಾಯವನ್ನು ಪರಿಗಣಿಸದೆ ಕಟ್ಟಡ ಕೆಡವಲು ಸರ್ಕಾರ ಕೈಗೊಂಡಿರುವ ನಿರ್ಧಾರ ಸರಿ ಇಲ್ಲ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ಗೌರಿಸತ್ಯ ಪರ ವಕೀಲರು ವಾದ ಮಂಡಿಸಿದರು. ಇದಕ್ಕೆ ಪೂರಕವಾಗಿ ಪ್ರೊ.ಎನ್.ಎಸ್. ರಂಗರಾಜು ಅವರು ಕಟ್ಟಡದ ಕುರಿತು ನೀಡಿರುವ ಅಭಿಪ್ರಾಯವನ್ನು ಸಹ ನ್ಯಾಯಲಯದ ಗಮನಕ್ಕೆ ತರಲಾಯಿತು. ಈ ಅಂಶವನ್ನು ಗಮನಿಸಿದ ನ್ಯಾಯಾಲಯವು ಆರ್ಕಿಯಾಲಜಿ ಸರ್ವೇ ಆಫ್ ಇಂಡಿಯಾ (ಎಎಸ್‌ಐ) ಮತ್ತು ನ್ಯಾಷನಲ್ ಟ್ರಸ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ (ಇಂಟ್ಯಾಕ್)ನ ಅಭಿಪ್ರಾಯ ಪಡೆಯಲು ಈ ಸಂಸ್ಥೆಗಳನ್ನು ಪಾರ್ಟಿ ಮಾಡುವಂತೆ ಡಿ.4 ರಂದು ಆದೇಶ ನೀಡಿದೆ. ಹೀಗಾಗಿ ಮುಂದಿನ ಹಂತದಲ್ಲಿ ನ್ಯಾಯಾಲಯವು ಈ ಎರಡು ಸಂಸ್ಥೆಗಳ ಅಭಿಪ್ರಾಯ ಪಡೆಯಲಿದೆ. ಹೀಗಾಗಿ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟಕ್ಕೆ ಪ್ರಾಥಮಿಕ ಹಂತದ ಗೆಲುವು ದೊರೆತ್ತಿದೆ.
ಕಟ್ಟಡ ಕೆಡವಲು ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡವನ್ನು ಸಂರಕ್ಷಿಸುವ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಈ ಎರಡು ಪಾರಂಪರಿಕ ಕಟ್ಟಡಗಳು ದುಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ಪಾರಂಪರಿಕ ಶೈಲಿಯಲ್ಲಿ ಮರು ನಿರ್ಮಾಣ ಸೂಕ್ತ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಹಮ್ಮಿಕೊ ಂಡಿದ್ದ ಅಧಿಕಾರಿಗಳ ಸಭೆಯಲ್ಲಿ ದೇವರಾಜ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡದ ಮರು ನಿರ್ಮಾಣಕ್ಕೆ ಕುರಿತು ಅಧಿಕಾರಿಗಳಿಂದ ವರದಿ ಪಡೆಯಲಾಗಿದ್ದು, ಈ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದು ಕಟ್ಟಡವನ್ನು ಮರು ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಅದೇಶದಿಂದ ಸರ್ಕಾರದ ನಿರ್ಧಾರಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ‘ದೇವರಾಜ ಮಾರುಕಟ್ಟೆಗೆ 91.6 ಕೋಟಿ ರೂ., ಲ್ಯಾನ್ಸ್‌ಡೌನ್ ನಿರ್ಮಾಣಕ್ಕೆ 36.95 ಕೋಟಿ ರೂ. ಮೊತ್ತದ ಡಿಪಿಆರ್ ತಯಾರಿಸಲಾಗಿದೆ.
ದಶಕದಿಂದ ಸಂರಕ್ಷಣೆ ಕಾಣದ ಕಟ್ಟಡ: ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ ‘ಲ್ಯಾನ್ಸ್‌ಡೌನ್’ ಕಟ್ಟಡ 2012 ಆಗಸ್ಟ್ 23,24 ರಂದು ಸುರಿದ ಧಾರಾಕಾರ ಮಳೆಗೆ ಆ.25 ರಂದು ಸಂಜೆ 6ಕ್ಕೆ ಕಟ್ಟಡದ ಒಂದು ಭಾಗ ಕುಸಿದು ನಾಲ್ವರು ಮೃತಪಟ್ಟಿದ್ದರು. ಲ್ಯಾನ್ಸ್‌ಡೌನ್ ಕಟ್ಟಡದ ದಕ್ಷಿಣ ಭಾಗದ ಮೊದಲ ಮಹಡಿಯ ಕೊಠಡಿ ಸಂಖ್ಯೆ 10, 11 ಮತ್ತು ನೆಲಮಾಳಿಗೆಯ 17ರ ಮೇಲ್ಛಾವಣಿ ಕುಸಿದಿತ್ತು. 11 ಜನವರಿ 2015 ರಂದು ಲ್ಯಾನ್ಸ್‌ಡೌನ್ ಕಟ್ಟಡದ ಜತೆಗೆ ದುಸ್ಥಿತಿಯಲ್ಲಿದ್ದ ಶತಮಾನದ ಇತಿಹಾಸ ಹೊಂದಿರುವ ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ದೊರೆಯಿತು. ದೇವರಾಜ ಮಾರುಕಟ್ಟೆಯನ್ನು 9 ಕೋಟಿ ರೂ., ಲ್ಯಾನ್ಸ್‌ಡೌನ್ ಕಟ್ಟಡವನ್ನು 6 ಕೋಟಿ ರೂ.ವೆಚ್ಚದಲ್ಲಿ ಸಂರಕ್ಷಣೆ ಮಾಡುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ, 28 ಆಗಸ್ಟ್ 2016 ರಂದು ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯ ಸಂದರ್ಭ ಕಟ್ಟಡದ ಒಂದು ಭಾಗ ಕುಸಿದು ಬಿತ್ತು. ಹೀಗಾಗಿ ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆಯ ಅಭಿವೃದ್ಧಿ ಕಾರ್ಯವನ್ನು ಕೈ ಬಿಡಲಾಯಿತು. ನಂತರ ಕಟ್ಟಡ ಸಂರಕ್ಷಣೆ ವಿಚಾರದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು, ಹೋರಾಟಗಳು ನಡೆಯಿತು. ಅಲ್ಲದೆ, ಹೈಕೋರ್ಟ್‌ನಲ್ಲಿ ಸುದೀರ್ಘ ಕಾನೂನು ಹೋರಾಟ ನಡೆಯಿತು. ಕಾನೂನು ಹೋರಾಟ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಮುಂದುವರೆದಿದೆ.
ಪಾರಂಪರಿಕ ತಜ್ಞರ ಅಭಿಪ್ರಾಯವನ್ನು ಲೆಕ್ಕಿಸದೆ ರಾಜ್ಯ ಸರ್ಕಾರ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡವನ್ನು ನೆಲಸಮಗೊಳಿಸಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ಮರು ನಿರ್ಮಾಣ ಮಾಡಲು ನಿರ್ಧರಿಸಿರುವುದು ಸರಿಯಾದ ಕ್ರಮವಲ್ಲ. ಕಟ್ಟಡವನ್ನು ಉಳಿಸಲು ನಿರಂತರ ಹೋರಾಟ ನಡೆಸುತ್ತಿದ್ದೇವೆ. ಕಟ್ಟಡದ ಕುರಿತು ತಜ್ಞರ ಅಭಿಪ್ರಾಯ ಪಡೆಯಲು ಸುಪ್ರೀಂಕೋರ್ಟ್ ಆದೇಶಿಸಿರುವುದು ಸಂತಸದ ವಿಚಾರ.
ಎನ್.ಎಸ್. ರಂಗರಾಜು, ಸದಸ್ಯ, ಜಿಲ್ಲಾ ಪಾರಂಪರಿಕ ಸಮಿತಿ