"ಲ್ಯಾನ್ಸ್‌ಡೌನ್" ಸ್ವಚ್ಛತೆಯೂ ಡೌನ್

lansdowne building mysore 1
Published on

ಸದೇಶ್ ಕಾರ್ಮಾಡ್ ಮೈಸೂರು
ಸ್ವಚ್ಛತೆಯಲ್ಲಿ ಪ್ರತಿವರ್ಷ ದೇಶದ ಗಮನ ಸೆಳೆಯುವ ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯ ಭಾಗದಲ್ಲಿಯೇ ಅಶುಚಿತ್ವ ತಾಂಡವ ವಾಡುತ್ತಿದೆ. ನಗರದ ಲ್ಯಾನ್ಸ್‌ಡೌನ್ ಕಟ್ಟಡದ ಆವರಣದಲ್ಲಿರುವ ಸಾರ್ವಜನಿಕ ಶೌಚಗೃಹ ಬಂದ್ ಆಗಿರುವ ಹಿನ್ನೆಲೆಯಲ್ಲಿ ಇದೀಗ ಲ್ಯಾನ್ಸ್‌ಡೌನ್ ಕಟ್ಟಡವೇ ಶೌಚಗೃಹವಾಗಿ ಮಾರ್ಪಾಡು ಹೊಂದಿದೆ.

ಸಾರ್ವಜನಿಕ ಶೌಚಗೃಹ ಬಂದ್ ಆಗಿರುವುದು ಹಾಗೂ ಅಕ್ಕಪಕ್ಕದಲ್ಲಿ ಸಾರ್ವಜನಿಕ ಶೌಚಗೃಹ ಇಲ್ಲವಾದ ಹಿನ್ನೆಲೆಯಲ್ಲಿ ಸಾರ್ವಜನಿ ಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಶೌಚಗೃಹದ ಕೊರತೆಯಿಂದ ಸಾರ್ವಜನಿಕರು ಕಟ್ಟಡದ ಹಿಂಭಾಗವನ್ನು ಮೂತ್ರಾಲಯವಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ಸುತ್ತಮುತ್ತಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ಲ್ಯಾನ್ಸ್‌ಡೌನ್ ಕಟ್ಟಡದ ಹಿಂಭಾಗ ತೆರಳಿದರೆ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ.

ಲ್ಯಾನ್ಸ್‌ಡೌನ್‌ಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಹೆಚ್ಚು ವಹಿವಾಟು ನಡೆಯುವ ಸ್ಥಳ ಕೂಡ ಇದಾಗಿದೆ. ಆದರೆ, ಸಾರ್ವಜನಿಕ ಶೌಚಗೃಹದ ಸಮಸ್ಯೆಯಿಂದ ಜನರು ಕಟ್ಟಡದ ಹಿಂಭಾಗವನ್ನು ಮೂತ್ರವಿಸರ್ಜನೆಗೆ ಬಳಸುವ ಅನಿವಾರ್ಯತೆ ಇದೆ. ಮೂತ್ರ ವಿಸರ್ಜನೆ ಮಾಡಿದ ನೀರು ಮಡುಗಟ್ಟಿ ನಿಂತಿದ್ದು, ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲ. ಹೀಗಾಗಿ ಕೊಳಚೆ ನೀರಿನಲ್ಲಿ ಸೊಳ್ಳೆಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪತಿಯಾಗುತ್ತಿದ್ದು, ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ.

ಸಾರ್ವಜನಿಕ ಶೌಚಗೃಹ ಬಂದ್

ಸಾಂಸ್ಕೃತಿಕ ನಗರಿ ಮೈಸೂರು ಬಯಲು ಶೌಚ ಮುಕ್ತ ನಗರ ಪ್ರಶಸ್ತಿಯನ್ನು ಪ್ರತಿವರ್ಷ ಪಡೆಯುತ್ತಿದೆ. ಆದರೆ, ನಗರ ಪಾಲಿಕೆಯ ಕಚೇರಿಯ ಪಕ್ಕದಲ್ಲಿಯೇ ಇರುವ ಲ್ಯಾನ್ಸ್‌ಡೌನ್ ಕಟ್ಟಡದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದರೂ ಪಾಲಿಕೆ ಶೌಚಗೃಹ ಸಮಸ್ಯೆ ಬಗೆಹರಿ ಸಲು ಕ್ರಮ ವಹಿಸಿಲ್ಲ. ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಸಂದರ್ಭ ಕಟ್ಟಡದ ಮುಂಭಾಗ ತಾತ್ಕಾಲಿಕ ಮಳೆ ನಿರ್ಮಿಸಲಾಯಿತು. ಆ ಸಂದರ್ಭದಲ್ಲಿಯೇ ಸಾರ್ವಜನಿಕ ಶೌಚಗೃಹವನ್ನೂ ನಿರ್ಮಾಣ ಮಾಡಲಾಯಿತು. ಆದರೆ, ಕೆಲವು ತಿಂಗಳವರೆಗೆ ಮಾತ್ರ ಕಾರ್ಯನಿರ್ವಹಿಸಿದ ಶೌಚಗೃಹ ನಂತರ ಬಂದ್ ಆಯಿತು. ಶೌಚಗೃಹದಿಂದ ನೀರು ಹರಿದು ಹೋಗಲು ಯುಜಿಡಿ ಮಾರ್ಗವನ್ನು ಈ ಕಟ್ಟಡದ ಮುಂಭಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಕಾಮಗಾರಿ ನಂತರ ಡಾಂಬರೀಕರಣ ಕೈಗೊಳ್ಳದ ಹಿನ್ನೆಲೆಯಲ್ಲಿ ಜನ ಹಾಗೂ ವಾಹನ ಸಂಚಾರ ದುಸ್ಥರವಾಗಿದೆ.

ಲ್ಯಾನ್ಸ್‌ಡೌನ್ ಕಟ್ಟಡದ ಒಂದು ಭಾಗ 2012ರಲ್ಲಿ ಕುಸಿಯಿತು. ಕಟ್ಟಡ ದುಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಕಟ್ಟಡದಲ್ಲಿದ್ದ ವರ್ತಕರನ್ನು ತೆರವುಗೊಳಿಸಿ ಅವರಿಗೆ ಕಟ್ಟಡದ ಮುಂಭಾಗದಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿಕೊಡಲಾಯಿತು. ಕಟ್ಟಡ ದುಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ಕಟ್ಟಡವನ್ನು ಕೆಡವಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಮಾಡಬೇಕು ಎಂಬ ತೀರ್ಮಾನವನ್ನು ನಗರ ಪಾಲಿಕೆ ಕೈಗೊಂಡಿದೆ. ಆದರೆ, ಸರ್ಕಾರ ಈ ಕಟ್ಟಡವನ್ನು ಕೆಡವಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸುವ ಅಥವಾ ಸಂರಕ್ಷಣೆ ಮಾಡುವ ವಿಚಾರದಲ್ಲಿ ಇದುವರೆಗೆ ಯಾವುದೇ ಒಂದು ತೀರ್ಮಾನಕ್ಕೆ ಬಾರದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಲ್ಯಾನ್ಸ್‌ಡೌನ್ ಕಟ್ಟಡದ ಆವರಣದಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಕೈಗೊಳ್ಳುವ ಆಸಕ್ತಿಯನ್ನು ನಗರ ಪಾಲಿಕೆ ತೋರುತ್ತಿಲ್ಲ.

ಇದು ಕೇವಲ ಲ್ಯಾನ್ಸ್‌ಡೌನ್ ಒಂದರ ಕತೆಯಲ್ಲ ನಗರದ ಹಲವಾರು ಕಡೆಗಳಲ್ಲಿ ಸಾರ್ವಜನಿಕ ಶೌಚಗೃಹ ಕೊರತೆಯಿಂದ ಸಾರ್ವಜ ನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಶೌಚಗೃಹ ನಿರ್ಮಾಣವಾಗಬೇಕಾಗಿದೆ. ಇಲ್ಲವಾದಲ್ಲಿ ಸ್ವಚ್ಛತೆಯಲ್ಲಿ ಮೈಸೂರು ಪ್ರಶಸ್ತಿ ಪಡೆಯುವುದರಲ್ಲಿ ಅರ್ಥವಿಲ್ಲ. ಕೆಲವು ಕಡೆಗಳಲ್ಲಿ ಸಾರ್ವಜನಿಕ ಶೌಚಗೃಹವಿದ್ದರೂ ಸಾರ್ವಜನಿಕರು ಅದನ್ನು ಬಳಕೆ ಮಾಡದೆ ಬಯಲು ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಅಂತಹವರಿಗೆ ನಗರ ಪಾಲಿಕೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡುವ ಕಾರ್ಯವನ್ನು ಮಾಡಬೇಕು.

ತ್ಯಾಜ್ಯದ ರಾಶಿ

ಲ್ಯಾನ್ಸ್‌ಡೌನ್ ಕಟ್ಟಡದ ತುಂಬ ತ್ಯಾಜ್ಯದ ರಾಶಿ ತುಂಬಿಕೊಂಡಿದೆ. ಕಟ್ಟಡದ ಮುಂಭಾಗದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶೆಡ್‌ನಲಿ ್ಲರುವ ಅಂಗಡಿ ಮಾಲೀಕರು ತ್ಯಾಜ್ಯವನ್ನು ಲ್ಯಾನ್ಸ್‌ಡೌನ್ ಕಟ್ಟಡದಲ್ಲಿ ತಂದು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಈ ಕಟ್ಟಡ ಸಂಪೂರ್ಣ ದುಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಕಟ್ಟಡದ ಒಳಗೆ ತೆರಳಿ ಶುಚಿತ್ವದ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಹಳೆಯ ಕಟ್ಟಡದ ತುಂಬ ರಾಶಿ ರಾಶಿ ಕಸ ತುಂಬಿಕೊಂಡಿದೆ.

ನಗರದ ಹೃದಯ ಭಾಗದಲ್ಲಿ ಸಾರ್ವಜನಿಕ ಶೌಚಗೃಹಗಳ ಅವಶ್ಯಕತೆ ಇದ್ದು, ಅಗತ್ಯ ಇರುವ ಕಡೆಗಳಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಲ್ಯಾನ್ಸ್‌ಡೌನ್ ಕಟ್ಟಡದಲ್ಲಿರುವ ಸಾರ್ವಜನಿಕ ಶೌಚಗೃಹ ಯಾವ ಕಾರಣಕ್ಕೆ ಬಂದ್ ಆಗಿದೆ ಎಂಬ ಕುರಿತು ಮಾಹಿತಿ ಇಲ್ಲ. ಕೂಡಲೇ ಸಾರ್ವಜನಿಕ ಶೌಚಗೃಹವನ್ನು ತೆರೆಯಲು ಕ್ರಮ ವಹಿಸಲಾಗುವುದು.
ಶಿವಕುಮಾರ್, ಮೇಯರ್

ಲ್ಯಾನ್ಸ್‌ಡೌನ್ ಕಟ್ಟಡದ ಕುರಿತು ಸರ್ಕಾರ ಕೂಡಲೇ ಒಂದು ಸ್ಪಷ್ಟ ತೀರ್ಮಾನಕ್ಕೆ ಬರುವುದು ಉತ್ತಮ. ಲ್ಯಾನ್ಸ್‌ಡೌನ್ ಕಟ್ಟಡದ ಸಂರಕ್ಷಣಾ ಕಾಮಗಾರಿಯನ್ನು ಕೈಗೊಳ್ಳಲಿ ಅಥವಾ ಕಟ್ಟಡವನ್ನು ಕೆಡವಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಮಾಡಲಿ. ಸರ್ಕಾರ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ನಾವು ಬದ್ಧ. ನಗರ ಪಾಲಿಕೆಯ ನಿರ್ಲಕ್ಷೃದಿಂದ ಕಟ್ಟಡ ದುಸ್ಥಿತಿಗೆ ತಲುಪಿದೆ. ಕಟ್ಟಡದ ಮುಂಭಾಗಲ್ಲಿ ನಿರ್ಮಾಣ ಮಾಡಿದ್ದ ಸಾರ್ವಜನಿಕ ಶೌಚಗೃಹ ಬಂದ್ ಆಗಿದ್ದು, ಸಾರ್ವಜನಿಕ ಶೌಚಗೃಹದ ವ್ಯವಸ್ಥೆ ಕಲ್ಪಿಸುವಂತೆ ನಗರ ಪಾಲಿಕೆಯ ಗಮನ ಸೆಳೆಯಲಾಗುವುದು.
ಆರ್. ಮೂರ್ತಿ, ಅಧ್ಯಕ್ಷ, ಲ್ಯಾನ್ಸ್‌ಡೌನ್ ಬಾಡಿಗೆದಾರರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net