ತೀಕ್ಷ್ಣ ಬರವಣಿಗೆಗೆ ಲಂಕೇಶ್ ಹೆಸರುವಾಸಿ: ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಹೇಳಿಕೆ

Lankesh Literature and Journalism Symposium Mandya
Published on

ಮಂಡ್ಯ: ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಸಾಕಷ್ಟು ಸಿಗುತ್ತಾರೆ. ಆದರೆ ಅವರಲ್ಲಿ ಭಿನ್ನವಾಗಿ ಪಿ.ಲಂಕೇಶ್ ಕಾಣುತ್ತಾರೆ. ನೆಲ, ಜಲ, ಭಾಷೆ ಉಳಿವಿಗೆ ಹೋರಾಟದ ಮುಂಚೂಣಿಯಲ್ಲಿದ್ದ ಲಂಕೇಶ್ ಅವರ ತೀಕ್ಷಣ ಬರವಣಿಗೆಯಿಂದಲೇ ಹೆಸರುವಾಸಿಯಾಗಿದ್ದಾರೆ ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಹೇಳಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಲಂಕೇಶ್ ಸಾಹಿತ್ಯ ಮತ್ತು ಪತ್ರಿಕೋದ್ಯಮ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ನಂತರ ಕರ್ನಾಟಕ ಕಂಡ ನಿರ್ಣಾಯಕ ಹಾಗೂ ಪ್ರಭಾವಶಾಲಿ ಮೇರು ವ್ಯಕ್ತಿತ್ವದ ವ್ಯಕ್ತಿ ಲಂಕೇಶ್. ಅವರು ಬಿಟ್ಟು ಹೋಗಿರುವ ಬರವಣಿಗೆಯ ಮೂಲಕ ನಮ್ಮ ನಡುವೆ ಈಗಲೂ ಇದ್ದಾರೆ ಎಂದು ಸ್ಮರಿಸಿದರು.

ಬರಹಗಳ ಮೂಲಕ ಕಟುವಾಗಿ ಟೀಕಿಸುತ್ತಾ ಇಡೀ ರಾಜಕೀಯ ವ್ಯವಸ್ಥೆಯನ್ನೇ ಬದಲಿಸುವ ಹಾಗೂ ಸರ್ಕಾರವನ್ನೇ ಬೀಳಿಸುವ ಶಕ್ತಿ ಪಿ.ಲಂಕೇಶ್ ಅವರಿಗಿತ್ತು. ಕವಿ, ನಾಟಕ, ನಟನೆ, ನಿರ್ದೇಶನ, ಅನುವಾದ, ಸಂಪಾದಕ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡಿರುವ ಪಿ.ಲಂಕೇಶ್ ಅವರು ಇತರಿಗೂ ಮಾದರಿ. ಇವರು ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುತ್ತಿದ್ದರು. ನೊಂದವರ ಬಗ್ಗೆ ಕಾಳಜಿ ವಹಿಸಿದ್ದರು. ವಿದ್ಯಾರ್ಥಿಗಳು ಇವರ ಹಾದಿಯಲ್ಲಿಯೇ ಸಾಗಬೇಕಿದೆ. ಏಕೆಂದರೆ ಪ್ರಸ್ತುತದಲ್ಲಿ ಕೇವಲ ಜ್ಞಾನಕ್ಕಾಗಿ ಓದುವುದೇ ಆಗಿದೆ. ಜತೆಗೆ ಸಂಬಳ ತರುವ ಕೆಲಸ ಸಿಕ್ಕರೆ ಸಾಕೆನ್ನುವ ಪರಿಸ್ಥಿತಿ ಇದೆ. ಆದರೆ ಇಲ್ಲಿ ಲಂಕೇಶ್ ಅಂತಹವರು ಬರೆದಿರುವ ಕೃತಿಗಳನ್ನು ಓದುವ ಹವ್ಯಾಸ ಬೆಳೆಸುವುದು ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.

ಪಿ.ಲಂಕೇಶ್ ಮತ್ತು ಸಮಕಾಲೀನ ಪತ್ರಿಕೋದ್ಯಮ ಕುರಿತು ನಾವು ದ್ರಾವಿಡ ಕನ್ನಡಿಗರು ಚಳವಳಿ ಸಂಚಾಲಕ ಅಭಿಗೌಡ ಹನಕೆರೆ ವಿಶೇಷ ಉಪನ್ಯಾಸ ನೀಡಿದರು. ಉಪನ್ಯಾಸಕ ರಾಜೇಂದ್ರ ಸಿಂಗ್‌ಬಾಬು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲ ಗುರುರಾಜ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಸಹಾಯಕ ಪ್ರಾಧ್ಯಾಪಕರಾದ ಡಾ.ಎಚ್.ಎಸ್.ಶಿವರಾಜು, ಡಾ.ಕೆ.ಚಂದ್ರಕಾಂತ್, ಡಾ.ಟಿ.ಆರ್.ದೀಪಕ್, ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್, ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆಯ ಪ್ರಭು ಅರವಿಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net