ಆಧುನಿಕತೆಗೆ ತೆರೆದುಕೊಂಡಾಗ ಭಾಷೆಗೆ ಉಳಿವು

24-10-Shiva-3
ರಾಯಚೂರಿನ ಮಕ್ಕಾ ದರ್ಜಾವಾದಲ್ಲಿ ದಸರಾ ನಿಮಿತ್ತ ಸೋಮವಾರ ಸಂಜೆ ಏರ್ಪಡಿಸಿದ್ದ ಬಹುಭಾಷಾ ಕವಿಗೋಷ್ಠಿಯನ್ನು ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಉದ್ಘಾಟಿಸಿದರು. ನಗರಸಭೆ ಸದಸ್ಯರಾದ ಜಯಣ್ಣ, ಬಸವರಾಜ ಪಾಟೀಲ್ ದರೂರ, ಸಾಹಿತಿ ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣಪಾಟೀಲ್ ಅಳ್ಳುಂಡಿ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಕೆ.ಸತ್ಯನಾರಾಯ, ಹಫೀಜುಲ್ಲಾ ಇದ್ದರು.
Published on

ರಾಯಚೂರು: ಯಾವುದೇ ಒಂದು ಭಾಷೆ ಬೆಳೆಯಬೇಕಾಗಿದ್ದರೆ ಆಧುನಿಕತೆಗೆ ತೆರೆದುಕೊಳ್ಳುವುದು ಅವಶ್ಯವಾಗಿದ್ದು, ಹೊಸ ಪರಿವರ್ತನೆ ಕಂಡು ಕೊಂಡಾಗ ಮಾತ್ರ ಆ ಭಾಷೆ ಬೆಳೆಯಲು ಸಾಧ್ಯವಾಗಲಿದೆ ಎಂದು ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಹೇಳಿದರು.
ಸ್ಥಳೀಯ ಮಕ್ಕಾ ದರ್ವಾಜದಲ್ಲಿ ನಗರಸಭೆ, ಕನ್ನಡ ಸಾಹಿತ್ಯ ಪರಿಷತ್ತು, ಐತಿಹಾಸಿಕ ಕೋಟೆ ಅಧ್ಯಯನ ಸಮಿತಿಯಿಂದ ದಸರಾ ಮಹೋತ್ಸವ ನಿಮಿತ್ತ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಬಹುಭಾಷ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕಾಲಘಟ್ಟಕ್ಕೆ ತಕ್ಕಂತೆ ಭಾಷೆಯೂ ಬೆಳೆಯಬೇಕು ಎಂದರು.
ದೋಆಬ್ ಪ್ರದೇಶ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಈ ಕಾರಣಕ್ಕೆ ಪ್ರಾಚೀನ ಕಾಲದಿಂದಲೂ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಸಾಕಷ್ಟು ಸಂಘರ್ಷಗಳು ನಡೆದಿದ್ದವು. ಈ ಪ್ರದೇಶ ಸಾಹಿತ್ತಿಕವಾಗಿಯೂ ಶ್ರೀಮಂತವಾಗಿದ್ದು, ದಾಸರು ಸೇರಿದಂತೆ ಹಲವಾರು ಪ್ರಕಾರಗಳ ಸಾಹಿತಿಗಳು ಉತ್ಕೃಷ್ಟ ಸಾಹಿತ್ಯ ನೀಡುವ ಮೂಲಕ ಈ ಭಾಗಕ್ಕೆ ಮೆರಗು ತಂದಿದ್ದಾರೆ ಎಂದು ಗುರುಸಿದ್ದಯ್ಯ ಹಿರೇಮಠ ತಿಳಿಸಿದರು.
ಕೋಟೆ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಸತ್ಯನಾರಾಯಣ ಮಾತನಾಡಿ, ಮೈಸೂರು ದಸರಾದಂತೆ ರಾಯಚೂರಿನಲ್ಲಿಯೂ ಬಹುಭಾಷಾ ಕವಿಗೋಷ್ಠಿ ನಡೆಸಲು ನಿರ್ಧರಿಸಿ ಕಳೆದ 15 ವರ್ಷದಿಂದ ಕವಿಗೋಷ್ಠಿ ನಡೆಸುತ್ತಾ ಬರಲಾಗುತ್ತಿದೆ.
ಸಮಿತಿ ಜನರಿಗೆ ಕೋಟೆಗಳ ಮಹತ್ವ ತಿಳಿಸಿಕೊಡುವುದರ ಜತೆಗೆ ಸಂರಕ್ಷಣೆ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಸಮಿತಿ ಪ್ರಯತ್ನದ ಲವಾಗಿ ಕೋಟೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿದೆ ಎಂದು ಹೇಳಿದರು.
ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ತಮ್ಮ ಗಟ್ಟತನವುಳ್ಳ ಬರಹ, ಆಲೋಚನೆ ಮೂಲಕ ಸಮಾಜದಲ್ಲಿನ ಜಡತ್ವ ಹೋಗಲಾಡಿರುವ ಶಕ್ತಿ ಕವಿಗಳಲ್ಲಿದ್ದು, ಸಮಾಜದಲ್ಲಿನ ಸಂಘರ್ಷ, ವ್ಯವಸ್ಥೆಗೆ ಸವಾಲಾಗುವಂತಹ ಕೆಲಸಗಳ ವಿರುದ್ಧ ಸಾಹಿತಿಗಳು ಹೋರಾಟ ನಡೆಸುತ್ತಾ ಬಂದಿದ್ದಾರೆ. ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿ ಬರಹಗಳಲ್ಲಿದೆ ಎಂದರು.
ಹಿರಿಯ ಸಾಹಿತಿ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕವಿಗಳು ಕವನ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಬಸವರಾಜ ಪಾಟೀಲ್ ದರೂರ, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಸಾಹಿತಿ ವಾಹೀದ್ ವಾಹೀದ್, ನಗರಸಭೆ ಎಇಇ ಮಹೇಶಕುಮಾರ, ಕೋಟೆ ಅಧ್ಯಯನ ಸಮಿತಿಯ ಹಫೀಜುಲ್ಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net