

ಬೆಳಗಾವಿ: ಭಾಷೆ ಬಾಂಧವ್ಯ ವೃದ್ಧಿಸುವಂತಿರಬೇಕು ಹೊರತು ಒಡೆಯುವಂತಿರಬಾರದು. ಕೊಂಕಣಿ ಭಾಷೆ ಶ್ರೀಮಂತ ಸಂಸ್ಕೃತಿ ಹೊಂದಿದ್ದು, ಹೊಂದಾಣಿಕೆ ಬೆಸೆಯುವ ಕೊಂಡಿಯಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದ್ದಾರೆ.
ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸೋಮವಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ ಕೊಂಕಣಿ ಸಾಹಿತ್ಯ-ಸಾಂಸ್ಕೃತಿಕ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೊಂಕಣಿ ಸಾಹಿತ್ಯ ಅಕಾಡೆಮಿ ಕಟ್ಟಡ ನಿರ್ಮಾಣಕ್ಕೆ ನಮ್ಮ ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ದೈವಜ್ಞ ಸಮಾಜದ ಅಧ್ಯಕ್ಷ ದಯಾನಂದ ನೇತಲಕರ್ ಮಾತನಾಡಿ, ಮನಸ್ಸುಗಳನ್ನು ಬೆಸೆಯುವ ಶಕ್ತಿ ಭಾಷೆಗಿದೆ. ಎಲ್ಲರೂ ಮಾತೃಭಾಷೆಗೆ ಗೌರವ ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಕೆ.ಜಗದೀಶ ಪೈ ಮಾತನಾಡಿ, ಮುಂದಿನ ಪೀಳಿಗೆಗೆ ಭಾರತೀಯ ಶ್ರೀಮಂತ ಸಂಸ್ಕೃತಿಯನ್ನು ಧಾರೆ ಎರೆಯಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಮಾತೃಭಾಷೆ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಮಾಡಬೇಕು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೊಂಕಣಿ ವಿಷಯ ಕಲಿಸಲು ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಬೇಕು ಎಂದು ಕೋರಿದರು.
ಕೊಂಕಣಿ ಸಮಾಜ ಮತ್ತು ಭಾಷೆೆಗಾಗಿ ಸೇವೆ ಸಲ್ಲಿಸಿದ ದೀನಾನಾತ ರೇವಣಕರ, ರಾಜಾರಾಮ ರಾಯಕರ, ಪ್ರಕಾಶ ತುಕಾರಾಂ ಅನ್ವೇಕರ್, ಕೀರ್ತಿಶೇಖರ ಕಾಸರಗೋಡ, ಪ್ರವೀಣ ರೇವಣಕರ್, ಡಾ.ಸುರೇಶ ಎಂ.ರಾಯಕರ್ ಅವರಿಗೆ ಕೊಂಕಣಿ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪತ್ರಕರ್ತೆ ಕೀರ್ತಿಶೇಖರ ಉಪನ್ಯಾಸ ನೀಡಿದರು.
ಡಾ.ವಸಂತ ಬಾಂದೇಕರ್ ಸ್ವಾಗತಿಸಿದರು. ಶಾಂತೇಶ ಶೇಟ್ ನಿರೂಪಿಸಿದರು. ಸಪ್ತಸ್ವರ ಸಂಗೀತ ವಿದ್ಯಾಲಯದ ಕಲಾವಿದರಿಂದ ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಜರುಗಿತು. ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಮೋದ ಶೇಟ ವಂದಿಸಿದರು. ಬಳಿಕ ಸಂಗೀತ ರಸ ಮಂಜರಿ, ಸಾಂಸ್ಕೃತಿಕ ನೃತ್ಯ ಹಾಗೂ ಸಾಂಪ್ರದಾಯಿಕ ಪದ ಕಾರ್ಯಕ್ರಮಗಳು ಜರುಗಿದವು.