

ಬೆಳಗಾವಿ : ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಂತದಲ್ಲಿ ಮಗುವಿಗೆ ಕನ್ನಡ ಭಾಷಾ ವಿಷಯದಲ್ಲಿ ಹಿಡಿತವಿದ್ದರೆ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಭಾಷಾ ಶಿಕ್ಷಕರು ಭಾಷೆಯ ಭದ್ರಬುನಾದಿ ಹಾಕುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಡಿಡಿಪಿಐ ಬಸವರಾಜ ನಾಲತವಾಡ ಹೇಳಿದರು.
ತಾಲೂಕಿನ ಕಾಕತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ವಲಯದ ಕನ್ನಡ ಭಾಷಾ ಶಿಕ್ಷಕರಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ವಿಷಯಧಾರಿತ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಮಗುವಿನ ಭಾಷಾ ಕೌಶಲ್ಯ ವೃದ್ಧಿಯ ಜತೆಗೆ ಮಗುವಿಗೆ ಕುತೂಹಲ ಬೆಳೆಸುವ ಮತ್ತು ಪ್ರಾಯೋಗಿಕ ಜ್ಞಾನ ನೀಡುವ ಮತ್ತು ಆಸಕ್ತಿ ಕೆರಳಿಸುವ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬೆಳಗಾವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಹಂಜಿ ಮಾತನಾಡಿ, ಕನ್ನಡ ನಾಡು, ನುಡಿ ಮೇಲಿನ ಕಾಳಜಿಗಾಗಿ ಮಕ್ಕಳಲ್ಲಿ ಕನ್ನಡತನವನ್ನು ಗಟ್ಟಿಗೊಳಿಸಬೇಕು. ಗಡಿ ಭಾಗದಲ್ಲಿ ಕನ್ನಡವನ್ನು ಬೆಳೆಸುವ ಕೈಂಕರ್ಯ ಭಾಷಾ ಶಿಕ್ಷಕರು ತೊಡಬೇಕು ಎಂದರು.
ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಮಿಲ್ಲಾನಟ್ಟಿ ಮಾತನಾಡಿ, ಮಗುವಿನ ಇನ್ನಿತರ ವಿಷಯಗಳ ಅಭಿವೃದ್ಧಿ ಭಾಷೆಯ ಗಟ್ಟಿತನದಲ್ಲಿಯೇ ಇರುವುದರಿಂದ ಭಾಷಾ ಶಿಕ್ಷಕರು ವಿಶೇಷ ಕಾಳಜಿ ವಹಿಸಿ ಮಗುವಿನ ಸಂಪೂರ್ಣ ಶೈಕ್ಷಣಿಕ ವೃದ್ಧಿಗೆ ವ್ಯಾಕರಣಬದ್ಧವಾದ ಕನ್ನಡ ಭಾಷೆ ಕಲಿಸಲು ಕಾಳಜಿ ವಹಿಸಬೇಕು ಎಂದರು.
ಮುಖ್ಯಾಧ್ಯಾಪಕ ಅಶೋಕ ಖೋತ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಪಿ. ದಾಸಪ್ಪನವರ, ಆರ್.ಟಿ.ಬಳಿಗಾರ, ಕನ್ನಡ ಭಾಷಾ ವಿಷಯದ ನೋಡಲ್ ಅಧಿಕಾರಿ ದೀಪಾ ನಾಯಕ, ಚಂದ್ರಶೇಖರ ಪೂಜಾರ, ರಾಮು ಗುಗ್ಗವಾಡ, ಎಂ.ಎ ಕೋರಿಶೆಟ್ಟಿ, ಬಿ ಎನ್.ಮಡಿವಾಳರ, ಗೀತಾ ಖಾನಟ್ಟಿ, ಶಶಿಕಲಾ ಹೊಸೂರ, ನೀತಾ ಯಲಜಿ, ಕುಮಾರ ಪಾಟೀಲ, ಜಮುನಾ ಕೋಳಿ, ಕೃಷ್ಣ ಕುರುಬರ ಇದ್ದರು. ಶಿವಾನಂದ ತಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಲಲಿತಾ ಮಹಾಜನಶೆಟ್ಟಿ ಸ್ವಾಗತಿಸಿದರು. ಸುಮಿತ್ರಾ ಕರವಿನಕೊಪ್ಪ ನಿರೂಪಿಸಿದರು ಮಹೇಶ ಅಕ್ಕಿ ವಂದಿಸಿದರು.