ಜ್ಞಾನ, ವಿದ್ವತ್‌ನಿಂದ ಭಾಷೆ ಬರಲ್ಲ: ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ

mysore
Published on

ಮೈಸೂರು: ಜ್ಞಾನ, ವಿದ್ವತ್ ಭಾಷೆಯಿಂದ ಬರಲ್ಲ. ಅದು ಕಲಿಕೆಯಿಂದ ಬರುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಹೇಳಿದರು.


ಮೈಸೂರು ವಿವಿ ಕಾನೂನು ವಿಭಾಗದ ಪ್ರಾಧ್ಯಾಪಕ ಹುದ್ದೆಯಿಂದ ವಯೋನಿವೃತ್ತಿ ಹೊಂದುತ್ತಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜು ಅವರನ್ನು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.


ಬಹುತೇಕ ಉನ್ನತ ಹುದ್ದೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಗ್ರಾಮಾಂತರ ಪ್ರದೇಶದವರು ಮುಂಚೂಣಿಯಲ್ಲಿದ್ದಾರೆ. ರಾಜ್ಯ ಹೈಕೋರ್ಟ್‌ನ 50 ನ್ಯಾಯಮೂರ್ತಿಗಳ ಪೈಕಿ 46 ಜನರು ಕನ್ನಡ ಹಾಗೂ ಗ್ರಾಮೀಣ ಹಿನ್ನೆಲೆಯವರು. ಜ್ಞಾನಕ್ಕೆ ಭಾಷೆ ಮುಖ್ಯವೇ ಅಲ್ಲ. ಪ್ರತಿಯೊಬ್ಬರಿಗೂ ಕಲಿಕೆಯ ಹಸಿವಿರಬೇಕು ಎಂದರು.


ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಶೋಷಿತರಿಗೆ ಮೀಸಲಾತಿ ದೊರೆಯಿತು. ಆದ್ದರಿಂದಲೇ ನಾನು ಸಹ ಎಂ.ಎಸ್ಸಿ ಓದಲು ಅನುಕೂಲವಾಯಿತು. ಅಂಬೇಡ್ಕರ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ಭಾರತದ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ, ಸಂವಿಧಾನದಲ್ಲಿ ಎಲ್ಲ್ಲ ಅಂಶಗಳನ್ನು ಸೇರ್ಪಡೆ ಮಾಡಿದ್ದಾರೆ ಎಂದರು.


ಈ ಹಿಂದೆ ಭಾರತದಿಂದ ಪ್ರತಿಭೆಗಳು ಪಲಾಯನವಾಗುವುದು ಸಾಮಾನ್ಯ ಎನಿಸಿತ್ತು. ಇದೀಗ ಅಮೆರಿಕ, ಲಂಡನ್ ಮೊದಲಾದ ದೇಶದಲ್ಲಿರುವ ಎರಡು, ಮೂರನೇ ತಲೆಮಾರಿನವರು ವಾಪಸ್ ಸ್ವದೇಶಕ್ಕೆ ಬರಲು ಮನಸ್ಸು ಮಾಡುತ್ತಿದ್ದಾರೆ. ಯಾರೇ ಆಗಲಿ ನಾವು ಬಂದ ಮೂಲವನ್ನು ಮರೆಯಬಾರದು ಎಂದರು.


ನಾನು ಕೇವಲ 375 ರೂ. ಶುಲ್ಕದಲ್ಲಿ ಬಿ.ಎಸ್ಸಿ, 1500 ರೂ. ಶುಲ್ಕದಲ್ಲಿ ಎಂ.ಎಸ್ಸಿ, 2100 ರೂ. ಶುಲ್ಕದಲ್ಲಿ ಎಲ್‌ಎಲ್‌ಬಿ ಪಾಸು ಮಾಡಿದವನು. ಓದುವಾಗ ಹಣಕಾಸಿನ ತೊಂದರೆ ಕಾರಣಕ್ಕಾಗಿ ಮೈಸೂರಿನ ಹೋಟೆಲ್‌ವೊಂದರಲ್ಲಿ ಲೆಕ್ಕ ಬರೆಯುವ ಕೆಲಸಕ್ಕೆ ಸೇರಿದ್ದೆ. ಇದರಿಂದ ತಿಂಗಳಿಗೆ 333 ರೂ. ವೇತನ, ಎರಡು ಹೊತ್ತು ಊಟ ದೊರೆಯುತ್ತಿತ್ತು ಎಂದು ಸ್ಮರಿಸಿಕೊಂಡರು.


ಸನ್ಮಾನ ಸ್ವೀಕರಿಸಿ ಪ್ರೊ.ಸಿ.ಬಸವರಾಜು ಮಾತನಾಡಿ, ವಿದ್ಯೆಯ ಜತೆಗೆ ಸಂಸ್ಕೃತಿಯನ್ನು ಕಲಿಯಬೇಕು. ವಿಧೇಯತೆ, ವಿನಮ್ರತೆ, ಸಹಬಾಳ್ವೆ ಸಮಸಮಾಜದ ಬಯಕೆ ಇರಬೇಕು. ದ್ವೇಷ, ತಾರತಮ್ಯ ಬಿಡಬೇಕು. ಇದು ಇರುವ ಕಡೆ ಪ್ರಗತಿ ಆಗಲ್ಲ ಎಂದರು.


ನಾನು ಎಷ್ಟೇ ನೋವು ಬಂದರೂ ವಿಚಲಿತನಾಗಲಿಲ್ಲ. ವಿದ್ಯೆ ಹಾಗೂ ವೃತ್ತಿಯ ಕಹಿ ಘಟನೆಗಳನ್ನು ಆಶೀರ್ವಾದ ಎಂದು ತಿಳಿದು ಓದುವ ಹಸಿವಿನಿಂದಾಗಿ ಈವರೆಗೆ ಬಂದಿರುವೆ. ಹೀಗಾಗಿ, ತಳ ಸಮುದಾಯದಿಂದ ಬಂದ ನನಗೆ ನೋವು-ಹಸಿವು ಶಿಕ್ಷಣ ಮುಖ್ಯ ಎಂಬುದನ್ನು ಕಲಿಸಿತು. ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವಣ್ಣ ಇಬ್ಬರೂ ಸಮ ಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಿದವರು. ಬಸವಣ್ಣನವರ ವಚನಗಳು ತಮ್ಮ ಮೇಲೆ ಅಪಾರ ಪ್ರಭಾವ ಬೀರಿವೆ ಎಂದರು.


ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಕಾನೂನು ಅಧ್ಯಯನ ಮಾಡುವುದು ಮುಖ್ಯ. ಕಾನೂನು ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ ವಕೀಲರು, ನ್ಯಾಯಾಧೀಶರು ಒಳ್ಳೆಯ ತೀರ್ಮಾನ ನೀಡಿದರೆ ಜನರಿಗೂ ಒಳ್ಳೆಯದಾಗುತ್ತದೆ ಎಂದರು.


ಪ್ರತಿಯೊಬ್ಬರಿಗೂ ಜ್ಞಾನದ ಹಸಿವು ಇರಬೇಕು. ಜ್ಞಾನಕ್ಕೆ ಸಮವಾಗಿರುವುದು ಯಾವುದೂ ಇಲ್ಲ. ಪ್ರತಿಭಾವಂತರಲ್ಲಿ ಗ್ರಾಮೀಣ ಪ್ರದೇಶದಿಂದ ಬಂದವರು ಹೆಚ್ಚು. ಶ್ರದ್ಧೆ, ಪ್ರಾಮಾಣಿಕತೆ, ವಿಶ್ವಾಸದಿಂದ ಕೆಲಸ ಮಾಡಿದರೆ ಅತ್ಯುನ್ನತ ಸ್ಥಾನ ತಲುಪಲು ಸಾಧ್ಯ. ಸಮಸ್ಯೆಗಳು ಬರುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸುವ ಗುಣ ಬೆಳೆಸಿಕೊಂಡರೆ ಜೀವನ ವಿಕಾಸವಾಗುತ್ತದೆ ಎಂದರು.


ಸಾಹಿತಿ ಡಾ. ಪ್ರಧಾನ ಗುರುದತ್ತ ಅಭಿನಂದನಾ ಭಾಷಣ ಮಾಡಿದರು. ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್. ರಂಗಪ್ಪ, ಪ್ರೊ.ಪಿ. ವೆಂಕಟರಾಮಯ್ಯ, ಪ್ರೊ.ಕೆ.ಆರ್. ವೇಣುಗೋಪಾಲ್, ಪ್ರೊ.ವಿ. ವಿಜಯಕುಮಾರ್, ಸಮಾಜ ಸೇವಕ ಮ.ವೆಂಕಟರಾಮ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net