

ಮೇಲುಕೋಟೆ: ಕವಿ ಪು.ತಿ.ನ. ಅವರ ಸಾಹಿತ್ಯವನ್ನು ನಾಡಿಗೆ ಕೊಡುಗೆಯಾಗಬೇಕಿದೆ. ಪು.ತಿ.ನ ಸಾಹಿತ್ಯ ಹಾಗೂ ಹೆಸರನ್ನು ಪ್ರಚಾರ ಮಾಡುವುದರಿಂದ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಪು.ತಿ.ನ ಟ್ರಸ್ಟ್‌ನ ನೂತನ ಅಧ್ಯಕ್ಷ ಪ್ರೊ. ಕೃಷ್ಣೇಗೌಡ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ನಂತರ ಅವರು ಮಾತನಾಡಿ, ಪು.ತಿ.ನ. ಕಾವ್ಯ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿ ಅವರ ಹೆಸರು ನಿತ್ಯ ನೂತನವಾಗಿರುವಂತಾದ ಕಾರ್ಯಕ್ರಮಗಳನ್ನು ಟ್ರಸ್ಟ್ ರೂಪಿಸುತ್ತದೆ. ಕುವೆಂಪು, ಬೇಂದ್ರೆ, ಪು.ತಿ.. ನವೋದಯ ಸಾಹಿತ್ಯದ ರತ್ನತ್ರಯರು. ಪು.ತಿ.ನ. ಸಾಹಿತ್ಯದ ಅಧ್ಯಯನ ಮಾಡಿದರೆ ಅವರ ಕಾವ್ಯದ ಚಿಂತನೆಗಳು ಅರ್ಥವಾಗುತ್ತವೆ. ಬದುಕು ಲಘುವಾಗಿರಬೇಕು ಎಂಬ ಅವರ ಕಾವ್ಯಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಹಸನಾಗುತ್ತದೆ. ಅವರ ಅಧ್ಯಾತ್ಮಿಕ ಹಾಗೂ ವೈಚಾರಿಕ ಚಿಂತನೆಗಳು ರಸಮಯ ಕಾವ್ಯಸ್ವರೂಪ ಪಡೆದುಕೊಂಡಿವೆ. ಹೀಗಾಗಿ ಅವರ ವಿಚಾರಧಾರೆಗಳು ಸಮಾಜಮುಖಿಯಾಗಿದ್ದು ಬೆಳವಣಿಗೆಗೆ ಪೂರಕವಾಗಿವೆ ಎಂದರು.
ಇಂಗ್ಲೀಷ್‌ನಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಪು.ತಿ.ನ ಅವರು ಬ್ರಿಟೀಷರ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಇಂಗ್ಲೀಷ್‌ನಲ್ಲಿ ಸಾಹಿತ್ಯ ಕೃಷಿ ಮಾಡಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿದ್ದರು. ಆದರೆ ಸ್ವಾರ್ಥ ಬಯಸದ ಪು.ತಿ.ನ. ಅವರು ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡಿ ಕರುನಾಡಿಗೆ ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು.
ಯಾವುದೇ ಅಧಿಕಾರವಿಲ್ಲದೆ ಶಿಕ್ಷಕನಾಗಿ ಸೇವೆ ಮಾಡಿದ ನಾನು ಸಮಾಜಕ್ಕೆ ಅಳಿಲು ಸೇವೆ ಮಾಡಿದ್ದೇನೆ. ಪು.ತಿ.ನ ಟ್ರಸ್ಟ್ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡು ಪು.ತಿ.ನ ಸಾಹಿತ್ಯವನ್ನು ಪ್ರಚಾರ ಮಾಡುವ ಮೂಲಕ ಭಾಷಾ ಬೆಳವಣಿಗೆಗೆ ಸೇವೆ ಸಲ್ಲಿಸುವ ಆಶಯ ನನ್ನದಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪು.ತಿ.ನ ಪುತ್ರಿ ಹಾಗೂ ಖ್ಯಾತ ಸಾಹಿತಿ ಅಲಮೇಲು ಮಾತನಾಡಿ, ಅಮೇರಿಕದಲ್ಲಿ ಪು.ತಿ.ನ ಗೀತರೂಪಕಗಳಿಗೆ ದೃಶ್ಯವೈಭವವವನ್ನು ನೀಡಿ ಪ್ರದರ್ಶಿಸುವ ಕಾರ್ಯ ಮಾಡಲಾಗುತ್ತದೆ. ಅಲ್ಲಿ ಕನ್ನಡ ಸಂಘ ಮಾಡಿ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕನ್ನಡ ಸಂಘದಲ್ಲಿ 2000 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರೊ. ಕೃಷ್ಣೇಗೌಡ ಸಾರಥ್ಯದಲ್ಲಿ ಮೇಲುಕೋಟೆ ಹಾಗೂ ನಾಡಿನಲ್ಲಿ ಪು.ತಿ.ನ ಅವರ ಸಾಹಿತ್ಯದ ವಿಚಾರಧಾರೆಗಳನ್ನು ಪ್ರಚಾರ ಮಾಡುವ ಕಾರ್ಯ ಹೆಚ್ಚಿನ ಮಟ್ಟದಲ್ಲಿ ನಡೆಯಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಕಸಾಪ ಮಾಜಿ ಅಧ್ಯಕ್ಷೆ ಹಾಗೂ ಮಂಡ್ಯದ ಎಸ್.ಬಿ.ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾಶಿವಲಿಂಗಯ್ಯ, ಕೆ.ಎಸ್.ನ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಕವಿ ಪುತಿನ ಟ್ರಸ್ಟ್ ಸದಸ್ಯರಾದ ಬಿ.ಎನ್. ಸುರೇಶ್, ಡಾ. ಸುಮಾರಾಣಿ ಶಂಬು, ಕೆ.ಜಿ. ನಾರಾಯಣ, ಕೊಪ್ಪಕುಮಾರ್, ಟಿ ಚಂದ್ರೇಗೌಡ, ಕನ್ನಡಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪು.ತಿ.ನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಪು.ತಿ.ನ. ಓದಿದ ಶಾಲೆ ಬಲವರ್ಧನೆಗೆ ಶ್ರಮ: ಮೇಲುಕೋಟೆಯಲ್ಲಿ ಪು.ತಿ.ನ. ಅವರು ವ್ಯಾಸಂಗ ಮಾಡಿದ ಶತಮಾನದ ಸರ್ಕಾರಿ ಶಾಲೆಯ ಬಲವರ್ಧನೆ ಮಾಡುವ ಕೆಲಸವನ್ನು ಟ್ರಸ್ಟ್ ಮಾಡಲಿದೆ ಎಂದ ಪ್ರೊ. ಎಂ.ಕೃಷ್ಣೇಗೌಡ, ಈ ಶಾಲೆಯಿಂದಲೇ ಪು.ತಿ.ನ ವಿಚಾರ. ಚಿಂತನೆಗಳನ್ನು ಮಕ್ಕಳಿಗೆ ತಲುಪಿಸುವ ಕಾರ್ಯ ಆರಂಭಿಸಲಾಗುತ್ತದೆ. ಶಾಲಾಭಿವೃದ್ಧಿಯ ಕನಸಿನ ಪಟ್ಟಿಯನ್ನು ನನಗೆ ನೀಡಿದರೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು. ಇದೇ ವೇಳೆ ಕವಿ ಪು.ತಿ.ನ ಅವರ ಮಗಳು ಅನಿವಾಸಿ ಭಾರತೀಯೆ ಅಲಮೇಲು ಶತಮಾನದ ಸರ್ಕಾರಿ ಶಾಲೆಯನ್ನು ಉಳಿಸಿ ಮಾದರಿಯಾಗಿ ರೂಪಿಸಲು ಎಲ್ಲಾ ಸಹಕಾರ ನೀಡುತ್ತೇನೆ ಎಂದರು. ಜತೆಗೆ ಮೀರಾ ಶಿವಲಿಂಗಯ್ಯ ಅವರು ಸಹ, ಶಾಲೆಗೆ ಬೇಕಾದ ಅಗತ್ಯಗಳನ್ನು ಪಟ್ಟಿ ಮಾಡಿ ನೀಡಿದರೆ ಸೌಲಭ್ಯಗಳನ್ನು ಪೂರೈಸಿ ಶಾಲೆಯನ್ನು ಮಾದರಿಯಾಗಿ ರೂಪಿಸಲು ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.