

ಮಡಿಕೇರಿ: ಕಥೆ, ಕವನ, ಬರೆಯುವವರು, ಒಂದು ಪುಸ್ತಕ ಬರೆದವರು ಸಾಹಿತಿಗಳಾಗಲು ಸಾಧ್ಯವಿಲ್ಲ. ಅವರು ಕೇವಲ ಬರಹಗಾರರಷ್ಟೆ, ಹಲವು ಪುಸ್ತಕ ಬರೆದು, ಅಪಾರ ಜ್ಞಾನ ಹೊಂದಿದವರು ಮಾತ್ರ ನಿಜವಾದ ಸಾಹಿತಿಗಳು ಎಂದು ಬ್ರಹ್ಮಗಿರಿ ವಾರಪತ್ರಿಕೆಯ ಸಂಪಾದಕ ಡಾ.ಉಳ್ಳಿಯಡ ಎಂ.ಪೂವಯ್ಯ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾಭವನದ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ವತಿಯಿಂದ ಲೇಖಕಿ ತೆನ್ನಿರ ಟೀನಾ ಚಂಗಪ್ಪ ಬರೆದಿರುವ ಮರ್‌ಂಜ ಪಾಳೆ ಕೊಡವ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪುಸ್ತಕ ಪ್ರಕಟಿಸುವವರಿಗೆ ತಾಳ್ಮೆ, ಮುಂದಾಲೋಚನೆ, ತ್ಯಾಗಮನೋಭಾವ ಮತ್ತು ವಿಮರ್ಶಾ ಶಕ್ತಿ ಇರಬೇಕು. ಆಗ ಮಾತ್ರ ಪುಸ್ತಕ ಪ್ರಕಟಣೆಗೆ ಅರ್ಹತೆ ಪಡೆದುಕೊಳ್ಳುತ್ತದೆ. ಕನ್ನಡ ಭಾಷೆಯಲ್ಲಿ ಲಕ್ಷೋಪ ಲಕ್ಷ ಪುಸ್ತಕಗಳು ಇದ್ದು, ಅದನ್ನು ಯಾರಿಗೂ ಎಣಿಕೆ ಮಾಡಲು ಸಾಧ್ಯವಿಲ್ಲ. ಆದರೆ, ಕೊಡವ ಭಾಷಾ ಪುಸ್ತಕ ಅಂದಾಜು ೭೦೦ ರಷ್ಟು ಇದ್ದು, ಅದರ ಬೆಳವಣಿಗೆಗೆ ಎಲ್ಲರೂ ಮುಂದಾಗಬೇಕು ಎಂದರು.
೧೯೦೦ರಲ್ಲಿ ಆದಿಕವಿ ಹರಿದಾಸ ಅಪ್ಪಚ್ಚ ಕವಿ ಕೊಡವ ಭಾಷೆಯ ಪ್ರಥಮ ಮುದ್ರಣವನ್ನು ಹೊರತಂದಿದ್ದು, ಅಂದಿನಿಂದ ಕೊಡವ ಭಾಷೆಯಲ್ಲಿ ಅಕ್ಷರ ರೂಪದ ಸಾಹಿತ್ಯ ಬೆಳವಣಿಗೆ ಕಾಣುತ್ತಿದೆ. ಪ್ರಾದೇಶಿಕ ಭಾಷೆಯಾದ ಕೊಡವ ಭಾಷೆಯನ್ನು ಬೆಳೆಸುವುದು ನಮ್ಮ ಕೈಯಲ್ಲಿದೆ. ಭಾಷೆ ಬೆಳವಣಿಗೆಗೆ ಪುಸ್ತಕ ಹಾಗೂ ಸಹಭಾಗಿತ್ವ ಮುಖ್ಯ. ಪ್ರತಿಯೊಬ್ಬರಿಗೂ ಮಾತೃ ಭಾಷೆಯನ್ನು ಬೆಳೆಸಲು ಅವಕಾಶವಿದೆ. ಕೀಳರಿಮೆಯಿಂದ ಭಾಷೆ ಬೆಳೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆ ದೊಡ್ಡಮಟ್ಟದಲ್ಲಿ ಬೆಳವಣಿಗೆ ಕಂಡಿದ್ದು, ಅದೇ ಮಾದರಿ ಕೊಡಗಿನಲ್ಲಿ ಕೊಡವ ಭಾಷೆಯನ್ನು ಭಾಷಭಿಮಾನಿಗಳು ಬೆಳೆಸುವಂತಾಗಬೇಕು. ಇಂಗ್ಲಿಷ್ ಬಳಕೆಯಿಂದ ಮೂಲ ಭಾಷೆಗಳು ಕುಂಟಿತಗೊಳ್ಳುತ್ತಿದೆ. ಭಾಷೆ ಬೆಳವಣಿಗೆಗೆ ಆಸಕ್ತಿ ಹಾಗೂ ಮುತುವರ್ಜಿ ಇರಬೇಕು. ಹೆಚ್ಚು ಜನಸಂಖ್ಯೆ ಇದ್ದಾಗ ಮಾತ್ರ ಪ್ರಾದೇಶಿಕ ಭಾಷೆ ಬೆಳವಣಿಗೆಗೆ ಸಹಕಾರಿಯಾಗಲಿದೆ. ಭಾಷೆ ಬೆಳವಣಿಗೆಗೆ ನಮ್ಮ ಕೊಡುಗೆ ಏನು ಎಂಬುವುದನ್ನು ಅರಿತಿರಬೇಕು. ಅಲ್ಲದೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ವಿಮರ್ಶೆ ಮಾಡಿದಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ ಎಂದರು.
ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರು ಮೊಬೈಲ್ ಬಳಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಬರಹಗಾರರಿಗೆ ಮೊಬೈಲ್ ಅಡ್ಡಿಬರುವುದಿಲ್ಲ. ಕಥೆ, ಕವನ, ಲೇಖನವನ್ನು ಬರೆಯಲು ಎಲ್ಲರಿಗೂ ಸಾಧ್ಯವಿಲ್ಲ. ಅದು ಹೃದಯದ ವಿಚಾರವಾಗಿದ್ದು, ಹೃದಯದಲ್ಲಿ ಮೂಡುವ ಯಾವುದೇ ಭಾವನೆಯನ್ನು ಬರಹಗಾರರಿಂದ ಮಾತ್ರ ವ್ಯಕ್ತಪಡಿಸಲು ಸಾಧ್ಯ ಎಂದರು.
ಬದುಕು ಸಾಹಿತ್ಯಕ್ಕೆ ಸಂಬಂಧಿಸಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ರೀತಿಸಿದಾಗ ಕಾವ್ಯ ಉದ್ಭವಿಸುತ್ತದೆ. ಕಾವ್ಯದ ಭಾವ, ಅರ್ಥ ಚೆನ್ನಾಗಿದ್ದರೆ ಮಾತ್ರ ಓದುಗರು ಅದರ ಒಳಗೆ ಇಳಿಯುತ್ತಾರೆ, ಆಗ ಮಾತ್ರ ಸಾರ್ಥಕತೆ ದೊರೆಯಲು ಸಾಧ್ಯ ಎಂದು ಅನಂತಶಯನ ಹೇಳಿದರು.
ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, ಸಾಹಿತ್ಯ ಚಿರಾಯುವಾಗಿರಬೇಕು. ಸನ್ಮಾನ, ಪ್ರಶಸ್ತಿಗಳಿಗಾಗಿ ಸೀಮಿತಗೊಳಿಸಬಾರದು. ಇದು ಉತ್ತಮ ಲೇಖಕರನ್ನು ನಾಶಪಡಿಸುತ್ತದೆ. ಸಾಹಿತ್ಯ ಇಂದಿಗೂ, ಮುಂದೆಯೂ ಪ್ರಸ್ತುತವಾಗಿರಬೇಕು ಎಂದರು.
ಪುರುಷರು ಮಹಿಳೆಯರ ಬೆಳವಣಿಗೆಗೆ ಬೆಂಬಲ ನೀಡುತ್ತಿದ್ದು, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಹೆಚ್ಚು ಸಾಧನೆ ಮಾಡುತ್ತಿರುವುದು ಶ್ಲಾಘನೀಯ, ಮಹಿಳೆಯರಲ್ಲಿ ಸಾಹಿತ್ಯಸಕ್ತಿ ಹೆಚ್ಚಾಗಬೇಕು. ಬೇರೆಯವರ ಜೀವನದೊಂದಿಗೆ ನಮ್ಮ ಜೀವನವನ್ನು ಹೋಲಿಕೆ ಮಾಡಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಕೊಡವ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಹೆಚ್ಚು ಶ್ರಮ ವಹಿಸುತ್ತಿದ್ದು, ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಅವಕಾಶ ಕಲ್ಪಿಸಿದರೆ ಜನಪದ ಕಲೆ, ಸಂಸ್ಕೃತಿಯ ಉಳಿವಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೊಡವ ಮಕ್ಕಡ ಕೂಟದ ವತಿಯಿಂದ ಕೊಡವ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ತನ್ನ ಸಂಪಾದಕೀಯದ ಚಂಗೀರ(ಸಂಶೋಧನಾ ಕೃತಿ), ಒತ್ತಜೋಡಿ(ಅಭಿನಂದನಾ ಗ್ರಂಥ) ಹಾಗೂ ಆಟ್‌ಪಾಟ್ ಪಡಿಪು ಪುಸ್ತಕ(ಸಂಗ್ರಹ ಪುಸ್ತಕ) ಎನ್ನುವ ಐದು ಪುಸ್ತಕ ಪ್ರಕಟ ಮಾಡಲಾಗಿದೆ. ಕಳೆದ ೭ ವರ್ಷದಿಂದ ಮಕ್ಕಳಿಗೆ ಆಟ್‌ಪಾಟ್ ಪಡಿಪು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಲ್ಲದೆ ದಾಖಲೀಕರಣ ಸಾಹಿತ್ಯದ ಹಾಗೂ ಕೊಡಗಿಗೆ ಸಂಬಂಧಿಸಿದ ೭೫ ಪುಸ್ತಕವನ್ನು ಪ್ರಕಟಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುವುದೆಂದರು.
ಲೇಖಕಿ ತೆನ್ನಿರ ಟೀನಾ ಚಂಗಪ್ಪ ಮಾತನಾಡಿ, ಪುಸ್ತಕದ ಬಗ್ಗೆ ವಿವರಿಸಿದರು. ಸಮಾಜ ಸೇವಕರಾದ ಚಿಲ್ಲವಂಡ ಕಾವೇರಪ್ಪ, ಕುಳುವಂಡ ಮಣಿ ಜೋಯಪ್ಪ, ಮುಕೋಡ್ಲು ವ್ಯಾಲಿ ಡ್ಯೂನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ, ಮುಕ್ಕಾಟ್ಟಿರ ಅಂಜು ಸುಬ್ರಮಣಿ, ಪಾಲೆಯಂಡ ಕಾವ್ಯ, ಕೂಪದಿರ ಜೂನ ವಿಜಯ್, ಬೊಳ್ಳಜಿರ ಯಮುನಾ ಅಯ್ಯಪ್ಪ, ಕೊಚ್ಚೇರ ರಿನ್ಸಿ ಕವನ್ ಉಪಸ್ಥಿತರಿದ್ದರು.