

ಗೋಣಿಕೊಪ್ಪ: ಸಾಹಿತ್ಯ ರಚನೆಯಿಂದ ಆ ಜನಾಂಗದ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳ ಬೆಳವಣಿಗೆ ಸಾಧ್ಯವಾಗುವುದರೊಂದಿಗೆ ಲೇಖಕರ ಜ್ಞಾನವೂ ವೃದ್ಧಿಯಾಗುತ್ತದೆ ಎಂದು ದಾನಿಗಳಾದ ಬಾದುಮಂಡ ಚಿಮ್ಮ ಉತ್ತಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ರೋಟರಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯ ನೂತನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಮಾತೃಭಾಷೆ ಬೆಳವಣಿಗೆಗೆ ಆ ಭಾಷೆಯಲ್ಲಿ ಸಾಹಿತ್ಯ ಪ್ರಕಟಿಸುವುದು, ಪ್ರಕಟಿತ ಸಾಹಿತ್ಯವನ್ನು ಓದುವುದರೊಂದಿಗೆ ಮಾತೃಭಾಷೆಯಲ್ಲೇ ಮಾತನಾಡುವುದು ಅತಿ ಮುಖ್ಯ. ಕೊಡವ ಜನಾಂಗವು ತನ್ನ ಶ್ರೀಮಂತ ಸಂಸ್ಕೃತಿಯಿಂದ ಪ್ರಪಂಚದಲ್ಲೇ ಖ್ಯಾತಿಯೊಂದಿಗೆ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ ಎಂದರು.
ಬ್ರಿಟಿಷರು ಪ್ರಪಂಚದ 68 ರಾಷ್ಟ್ರಗಳನ್ನು ಆಳಿದ್ದರೂ ಕೊಡವ ಜನಾಂಗದವರೊಂದಿಗೆ ಮಾತ್ರ ಸಹಭೋಜನ ಮಾಡಿದ್ದಾರೆ. ಇದಕ್ಕೆ ಕಾರಣ ಕೊಡವ ಜನಾಂಗದವರಿಗೆ ರಕ್ತಗತವಾಗಿ ಬಂದಿರುವ ಧೈರ್ಯ, ಶೌರ್ಯ, ನಿಯತ್ತು, ನೀತಿ-ನಿಯಮಗಳ ಪಾಲನೆ, ವಿಶೇಷ ಸಂಸ್ಕೃತಿ ಹಾಗೂ ನಂಬಿಕೆಗೆ ಅರ್ಹರಾಗಿರುವ ಜನಾಂಗ ಎಂಬುದು ಗಮನಾರ್ಹ ಸಂಗತಿ. ಇದೆಲ್ಲವನ್ನೂ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸಾಹಿತ್ಯ ಸೃಷ್ಟಿಸುವ ಹಾಗೂ ಪ್ರಕಟಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೊಡವ ತಕ್ಕ್ ಎಳ್ತ್‌ಕಾರಡ ಕೂಟಕ್ಕೆ ಆರ್ಥಿಕ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು ಎಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಕೂಟ ಮಾಡಿದ ಸಾಧನೆಯ ಬಗ್ಗೆ ವಿವರಿಸಿ ಯುವ ಲೇಖಕರನ್ನು ಬೆಳೆಸಲು ಕೂಟ ಕಲಿಕಾ ಕೇಂದ್ರದ ರೀತಿ ಕಾರ್ಯ ನಿರ್ವಹಿಸುತ್ತಿದೆ. ಯುವ ಪ್ರತಿಭೆಗಳ ಪ್ರೋತ್ಸಾಹಕ್ಕೆ ಎಳ್ತ್‌ಕಾರಡ ಕೂಟವು ಸದಾ ಸಿದ್ಧವಿರುತ್ತದೆ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ಬನ್ಸಿ ಪೂವಣ್ಣ ಮಾತನಾಡಿ, ಸಣ್ಣ ಮಕ್ಕಳಿಂದ ವೃದ್ಧರವರೆಗೆ ಎಲ್ಲ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆ ನಡೆಸುವುದರೊಂದಿಗೆ ತಿಂಗಳಿಗೊಂದು ಕೊಡವ ಪುಸ್ತಕ ಬಿಡುಗಡೆಗೊಳಿಸುತ್ತಿರುವ ಕೂಟದ ಸಾಧನೆ ಶ್ಲಾಘನೀಯ ಎಂದರು.
ದಾನಿಗಳಾದ ಬೊಪ್ಪಂಡ ತಾರ ಕರುಂಬಯ್ಯ ಮಾತನಾಡಿ, ಎಲ್ಲರೂ ಕೊಡವ ಭಾಷೆಯಲ್ಲೇ ಮಾತನಾಡಿದರೆ ಮಾತ್ರ ಭಾಷೆ ಬೆಳೆಯುತ್ತದೆ. ಕೂಟದ ವತಿಯಿಂದ ಇನ್ನಷ್ಟು ಉತ್ತಮ ಸಾಹಿತ್ಯ ಪ್ರಕಟಗೊಳ್ಳಲಿ ಎಂದು ಹಾರೈಸಿದರು.
ರೋಟರಿ ಸಂಸ್ಥೆಯ ಖಜಾಂಚಿ ಅಮ್ಮಣಕುಟ್ಟಂಡ ಸರೋಜಾ, ಲೇಖಕಿ ಚೊಟ್ಟೆಯಾಂಡಮಾಡ ಲಲಿತ ಕಾರ್ಯಪ್ಪ, ಲೇಖಕಿ ನೂರೇರ ಸರಿತ ಉತ್ತಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಡೆಸಿದ ಕೊಡವ ಹಾಡು, ಓದುವುದು, ಕೊಡವ ಶಬ್ದ ಹೇಳುವುದು, ಆಶುಭಾಷಣ ಹಾಗೂ ಹಾಸ್ಯ ಸ್ಪರ್ಧೆಗಳಲ್ಲಿ ವಿಜೇತರಿಗೆ ವಿಭಾಗವಾರು ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.
ಪ್ರಾಂಶುಪಾಲೆ ವಿಶಾಲಾಕ್ಷಿ, ಕೂಟದ ಸದಸ್ಯರಾದ ಬಡುವಮಂಡ ಜೀವನ್, ಪುಷ್ಪಾ ಶಿವರಾಮ್ ರೈ, ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಉಪಾಧ್ಯಕ್ಷ ಚೆಂಬಾಂಡ ಶಿವಿ ಭೀಮಯ್ಯ ಮತ್ತಿತರರು ಹಾಜರಿದ್ದರು.