

ಮೂಡಿಗೆರೆ: ತಾಲೂಕಿನಲ್ಲಿ ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಳೆ ಬಿಡುವು ನೀಡಿದರೂ ಜೋರಾಗಿ ಗಾಳಿ ಬೀಸಿದ್ದರಿಂದ ಅಲ್ಲಲ್ಲಿ ಮರಗಳು ಬಿದ್ದಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡು ವಾರ ಕಳೆದಿದೆ. ಭೂಕುಸಿತದಿಂದ ಮನೆ ನೆಲಸಮವಾಗಿದ್ದು, ರಸ್ತೆಗಳು ಕೊಚ್ಚಿ ಹೋಗಿವೆ.
ಶನಿವಾರ ಬೆಳಗ್ಗೆ 6ರಿಂದ ಮಳೆ ಕಡಿಮೆಯಾಗಿ ಬಿಸಿಲು ಕಾಣಿಸಿಕೊಂಡಿತ್ತು. ಮಧ್ಯಾಹ್ನ ಬಿಸಿಲು ಕಣ್ಮರೆಯಾಗಿ ಗಾಳಿಯೊಂದಿಗೆ ಮಳೆ ಆರಂಭಗೊಂಡಿತು. ಸಿಗಡಿಮೂಲೆ ಗ್ರಾಮದಲ್ಲಿ ಭತ್ತದ ಗದ್ದೆ, ಶುಂಠಿ ಬೆಳೆ ಸೇರಿದಂತೆ ಅನೇಕ ಬೆಳೆಗಳು ಜಲಾವೃತಗೊಂಡಿವೆ. ಒಳ್ಳೆಸಾಲಿನ ಗದ್ದೆಗಳಲ್ಲಿ 3 ದಿನದಿಂದ ನೀರು ನಿಂತಿರುವುದರಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ದೇವರುಂದ ಗ್ರಾಮದ ಅಕ್ಕಿರುದ್ಧಿ ಎಂಬಲ್ಲಿ ಜಪಾವತಿ ನದಿ ಉಕ್ಕಿ ರಸ್ತೆ ಸಂಪರ್ಕ ಕಡಿತವಾಗಿತ್ತು. ಉಗ್ಗೆಹಳ್ಳಿ ಕಾಲನಿ ಬಳಿ ಹೇಮಾವತಿ ನದಿ ಉಕ್ಕಿ ಗದ್ದೆ ಬಯಲು ಜಲಾವೃತಗೊಂಡಿತ್ತು.
ತ್ರಿಪುರ ಗ್ರಾಮದ ಪಟ್ಟದೂರು ಚಂದ್ರಮ್ಮ, ಊರುಬಗೆ ಗ್ರಾಮದ ವಿಜಯಕುಮಾರ್, ಬಿದರಹಳ್ಳಿ ಲಿಂಗಪ್ಪ, ಹಿರೇಶಿಗರದ ಪ್ರದೀಪ್ ಎಂಬುವರ ಮನೆಗಳು ನೆಲಸಮವಾಗಿವೆ. ಮೂಡಿಗೆರೆ ಪಟ್ಟಣ, ಗೋಣಿಬೀಡು, ಬಣಕಲ್, ಬಾಳೂರು ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ನಿರಾಶ್ರಿತರನ್ನು ಕಾಳಜಿ ಕೇಂದ್ರದಲ್ಲಿ ಇರಿಸಲಾಗಿದೆ.
ಕಿರುಗುಂದ ಗ್ರಾಮದ ಸತ್ಕಲ್ ಎಂಬಲ್ಲಿ ಕೆ.ಆರ್.ಶಿವಮೂರ್ತಿ ಎಂಬುವವರ ತೋಟ ಮಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಕಿರುಗುಂದ ಗ್ರಾಮದ ಆರ್.ಮಂಜುನಾಥ್ ಅವರ ತೋಟದಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಉದುಸೆ ಗ್ರಾಮದ ಭಾರತಾಂಬಿಕಾ ಅಮ್ಮನವರ ದೇವಸ್ಥಾನಕ್ಕೆ ಹೋಗುವ ದಾರಿ ಭೂಕುಸಿತದಿಂದ ಕೊಚ್ಚಿ ಹೋಗಿದೆ. ಉದುಸೆ ಗ್ರಾಮದ ಬೋಬೇಗೌಡ ಅವರ ತೋಟಕ್ಕೆ ಹಾನಿ ಉಂಟಾಗಿದೆ. ಹೆಗ್ಗರವಳ್ಳಿ ಬೆಟ್ಟೇಗೌಡ ಅವರ ಮನೆಯ ಕಾಂಪೌಂಡ್ ಮತ್ತು ತಡೆಗೋಡೆ ಕುಸಿದಿದೆ. ಹೆಗ್ಗರವಳ್ಳಿ ಸುಪ್ರೀಮ್ ಎಂಬುವವರ ಕಾಫಿ, ಅಡಕೆ ತೋಟದಲ್ಲಿ ಭೂಕುಸಿತವಾಗಿದೆ. ಹ್ಯಾರಗುಡ್ಡೆ ಗ್ರಾಮದ ಜಿ.ಸಂದರ್ಶ ಎಂಬುವರ ಮನೆ ಆವರಣದ ಜಾಗ ಕುಸಿದಿದೆ.
ಮೂಡಿಗೆರೆ-ಸಕಲೇಶಪುರ ರಸ್ತೆಗೆ ಚರಂಡಿಯಿಲ್ಲದ ಕಾರಣ ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆ ಕೊಚ್ಚಿ ಹೋಗಿದ್ದರಿಂದ ಜನ್ನಾಪುರದಿಂದ ಕಿರುಗುಂದದವರೆಗೆ 6 ಕಿ.ಮೀ ರಸ್ತೆ ಸಂಪೂರ್ಣ ಗುಂಡಿಯಾಗಿದೆ. ಮಾಕೋನಹಳ್ಳಿ, ನಂದಿಪುರ, ಚಂದ್ರಾಪುರ ಕಮ್ಮರಗೋಡು, ಅಗ್ರಹಾರ, ಉದುಸೆ, ಕನ್ನೆಹಳ್ಳಿ, ದೇವರುಂದ, ಬೈರಾಪುರ, ಊರುಬಗೆ, ಗೌಡಳ್ಳಿ, ಹೊಸಕೆರೆ, ಮೂಲರಹಳ್ಳಿ, ಗುತ್ತಿ, ದೇವರಮನೆ, ಹೆಸಗೋಡು ಮತ್ತಿತರೆ ಕಡೆ ವಿದ್ಯುತ್ ಕಡಿತಗೊಂಡು ಒಂದು ವಾರ ಕಳೆದಿದೆ. ಕುಡಿಯಲು ನೀರಿಲ್ಲದೆ ಜನ ಮಳೆ ನೀರನ್ನು ಬಳಸುತ್ತಿದ್ದಾರೆ. ಮಳೆಯೊಂದಿಗೆ ವಿಪರೀತ ಗಾಳಿ ಮರಗಳನ್ನು ಬುಡಮೇಲು ಮಾಡುತ್ತಿದೆ. ವಿದ್ಯುತ್ ಕಂಬಗಳು ಅಲ್ಲಲ್ಲಿ ಮುರಿದು ಬಿದ್ದಿವೆ. ಕಿತ್ತಲೆಗಂಡಿ ಗ್ರಾಮಕ್ಕೆ 4 ದಿನದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಪಟ್ಟಣದಿಂದ 6 ಕಿ.ಮೀ. ದೂರವಿರುವ ಕಿತ್ತಲೆಗಂಡಿ ಗ್ರಾಮದ ಪಂಪ್‌ಸೆಟ್‌ಗೆ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಇದ್ದರೂ ಅದರ ಸಂಪರ್ಕವನ್ನು ಮೆಸ್ಕಾಂ ಅಧಿಕಾರಿಗಳು ಕಡಿತಗೊಳಿಸಿದ್ದಾರೆ. ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಮೂಲಕ ಸಂಪರ್ಕ ಕಲ್ಪಿಸಿದರೆ ಪಟ್ಟಣದ ನಿವಾಸಿಗಳ ಕುಡಿಯುವ ನೀರಿಗೆ ತೊಂದರೆಯಾಗದು.