

ಮೂಡುಬಿದಿರೆ: ಕಾರ್ಕಳ - ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಪೆಟ್ರೋಲ್ ಪಂಪ್ ಬಳಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಭೂ ಕುಸಿತ ಸಂಭವಿಸುತ್ತಲೇ ಇದೆ. ಮಳೆಗಾಲದಲ್ಲಿ ಈ ಭಾಗದಲ್ಲಿ ಭೂ ಕುಸಿತ ಸಂಭವಿಸಿದ್ದು, ಹೆದ್ದಾರಿ ಕಾಮಗಾರಿ ನಡೆಸುವ ವೇಳೆ ಇಲ್ಲಿ ನಡೆಸಲಾದ ಅವೈಜ್ಞಾನಿಕ ಕಾಮಗಾರಿಯೇ ಕುಸಿತಕ್ಕೆ ಕಾರಣ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಕೆಲವು ಬಾರಿ ಭೂ ಕುಸಿತ ಸಂಭವಿಸಿದ್ದರೂ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರು ಇಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ.ಭೂಕುಸಿತ ಪ್ರದೇಶದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದು, ಅದು ಕೂಡ ನೆಲಕ್ಕುರುಳುವ ಭೀತಿ ಎದುರಿಸುತ್ತಿದೆ. ರಸ್ತೆ ಆಳವಾಗಿ ಕಡಿಯುವಾಗ ಮೊದಲಿದ್ದ ರಸ್ತೆಯ ಸಮಾನಾಂತರಕ್ಕೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದೆ. ಆ ಟ್ರಾನ್ಸ್‌ಫಾರ್ಮರ್ ಪಕ್ಕದಲ್ಲೇ ಭೂಮಿ ಕುಸಿತವಾಗುತ್ತಿರುವುದರಿಂದ ಮಳೆ ಹೆಚ್ಚಾದರೆ, ಮಣ್ಣು ಸಹಿತ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೂಡ ಕುಸಿದು ಬೀಳುವ ಸಾಧ್ಯತೆಯಿದೆ.ಈ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ಮುನ್ನೆಚ್ಚರಿಗೆ ವಹಿಸುವ ಅಗತ್ಯವಿದೆ.
ಹೆದ್ದಾರಿ ಅಗಲ ಮಾಡುವಾಗ ಇಲ್ಲಿ ಮೊದಲಿದ್ದ ರಸ್ತೆಯನ್ನು ಕಡಿಯಲಾಗಿದೆ. ಎಸ್‌ಕೆಎಫ್ ಮತ್ತು ಪೆಟ್ರೋಲ್ ಪಂಪ್ ನಡುವಿನ ರಸ್ತೆಯನ್ನು ಅಗಲಗೊಳಿಸುವಾಗ ಸರ್ವೀಸ್ ರಸ್ತೆಯನ್ನು ಒಂದು ಕಡೆ ಹಾಗೇ ಎತ್ತರವಾಗಿ ಉಳಿಸಿಕೊಂಡು, ಇನ್ನೊಂದು ಬದಿಯಲ್ಲಿ ಒಂದು ಕಡೆ ಪೆಟ್ರೋಲ್ ಪಂಪ್‌ಗೆ ತೆರಳುವವರಿಗೆಂದು ಕಡಿಯಲಾಗಿದೆ. ಆದರೆ, ಎರಡೂ ಬದಿಯಲ್ಲಿ ಆಳವಾಗಿ ಅಗೆದಿರುವ ಪ್ರದೇಶದಲ್ಲಿ ಭೂಮಿ ಕುಸಿಯದಂತೆ ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ. ಗುತ್ತಿಗೆದಾರರು, ಸ್ಥಳೀಯಾಡಳಿತ ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಅಪಾಯ ಸಂಭವಿಸುವುದು ಖಚಿತ.