ಪೆರ್ಮಂಕಿ ಕೈಗುರಿಯಲ್ಲಿ ಭೂಕುಸಿತ : ಕೆತ್ತಿಕಲ್‌ನಂತೆ ಹಾನಿ ಸಂಭವಿಸುವ ಸಾಧ್ಯತೆ : 1 ಕಿ.ಮೀ. ಸುತ್ತ ಪ್ರದೇಶದಲ್ಲಿ ಆತಂಕ ಸೃಷ್ಟಿ

New Project (34)
Published on

ಗುರುಪುರ: ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರ್ಮಂಕಿ ಗ್ರಾಮದ ಕೈಗುರಿಯಲ್ಲಿ ಕಳೆದ ಮೂರು ದಿನಗಳಿಂದ ಭೂಕುಸಿತ ಸಂಭವಿಸುತ್ತಿದ್ದು, ಮೇಲ್ಭಾಗದ ಡಾಂಬರು ರಸ್ತೆ, ಇಳಿಜಾರು ಪ್ರದೇಶದ ಅಡಕೆ-ತೆಂಗಿನ ತೋಟ ಹಾಗೂ ಸುತ್ತಲ ಒಂದು ಕಿ.ಮೀ. ಅಂತರದಲ್ಲಿರುವ ಹಲವು ಮನೆಗಳು ಅಪಾಯ ಎದುರಿಸುವಂತಾಗಿದೆ.

ಪೆರ್ಮಂಕಿಯ ಕೈಗುರಿಯಲ್ಲಿ ಶನಿವಾರ ರಾತ್ರಿ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದ್ದರೆ, ಭಾನುವಾರ ಮತ್ತು ಸೋಮವಾರ ಸುಮಾರು 4 ಅಡಿ ಕೆಳಕ್ಕೆ ಭೂಮಿ ಕುಸಿದಿದೆ. ಈ ಹಂತದಲ್ಲಿ ಮೇಲ್ಭಾಗದ ರಸ್ತೆ ಬಿರುಕು ಬಿಟ್ಟು ಸಂಪರ್ಕ ಸ್ಥಗಿತಗೊಂಡಿದೆ. ಇಳಿಜಾರು ಭಾಗದಲ್ಲಿರುವ ತೆಂಗು ಮತ್ತು ಅಡಕೆ ತೋಟಕ್ಕೆ ಗುಡ್ಡದ ಮಣ್ಣು ಬಿದ್ದಿದೆ. ತೋಟದತ್ತ ಭಾರಿ ಮಣ್ಣು ಬಿದ್ದು, ಮಣ್ಣಿನ ಭಾರಕ್ಕೆ 50ಕ್ಕೂ ಹೆಚ್ಚು ತೆಂಗು ಮತ್ತು ಅಡಕೆ ಮರಗಳು ನೆಲಮುಖವಾಗಿವೆ. ಇದರಿಂದ ಸ್ಥಳೀಯ ತೋಟಗಾರರಿಗೆ ಲಕ್ಷಾಂತರ ರೂ. ನಷ್ಟ ಆಗಿರುವ ಬಗ್ಗೆ ಅಂದಾಜಿಸಲಾಗಿದೆ. ಪರಂಬೋಕು ತೋಡುಗಳು ಮತ್ತು ಕೆರೆಯಲ್ಲಿ ಮಣ್ಣು ತುಂಬಿದ್ದು, ತೋಡುಗಳು ನಾಪತ್ತೆಯಾಗಿವೆ. ಸತತ ಗಾಳಿ-ಮಳೆಯಿಂದ ಗುಡ್ಡದ ನೀರು ಎಲ್ಲೆಂದರಲ್ಲಿ ಹರಿಯುವಂತಾಗಿದ್ದು, ಈ ಪ್ರದೇಶದ ಜನರಲ್ಲಿ ಭೀತಿ ಮನೆ ಮಾಡಿದೆ.

ಭೂಕುಸಿತದಿಂದ ಮನೆ ಗೋಡೆ ಬಿರುಕು ಬಿಟ್ಟಿರುವ ಕೈಗರಿಯ ಎವುಜಿ ಎಂಬುವರ ಕುಟುಂಬ ಜು.20ರಂದು ವಾಮಂಜೂರಿಗೆ ಸ್ಥಳಾಂತರಗೊಂಡಿದ್ದರೆ ಮಂಗಳವಾರ ಶಿರಿಲ್ ಎಂಬುವರ ಕುಟುಂಬವು ಪೆರ್ಮಂಕಿಯ ಬಾಡಿಗೆ ಮನೆಯೊಂದಕ್ಕೆ ಶಿಫ್ಟ್ ಆಗಿದೆ. ಕ್ರಿಶ್ಚಿಯನ್ ಜನಸಂಖ್ಯೆಯ ಈ ಪ್ರದೇಶದಲ್ಲಿ ಇನ್ನೂ ನಾಲ್ಕೈದು ಮನೆಗಳಿಗೆ ಅಪಾಯ ಕಾದಿದೆ.

ಘಟನಾ ಸ್ಥಳಕ್ಕೆ ಸೋಮವಾರ ತಾಪಂ ಕಾರ್ಯನಿರ್ವಹಣಾಧಿಕಾರಿ(ಸಿಒ) ಮಹೇಶ್ ಹೊಳ್ಳ, ಪಂಚಾಯಿತಿ ಅಧ್ಯಕ್ಷ ಹಾಗೂ ವಾರ್ಡ್ ಸದಸ್ಯರೂ ಆಗಿರುವ ಹರಿಕೇಶ ಶೆಟ್ಟಿ ನಡಿಗುತ್ತು, ಸದಸ್ಯ ದಿನೇಶ್ ಕುಮಾರ್ ಬಜಿಲೊಟ್ಟು, ಪಿಡಿಒ ಅನಿತಾ ಕ್ಯಾಥರಿನ್, ಪಂಚಾಯತ್‌ರಾಜ್ ಇಲಾಖೆಯ ಇಂಜಿನಿಯರ್ ಲಾಯ್ಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪೆರ್ಮಂಕಿ ಕೈಗುರಿಯಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ರಸ್ತೆ ಕುಸಿದ ಬಳಿಕ ಈ ಭಾಗದ ಜನರು ಸುತ್ತುಬಳಸಿ ಸಂಚರಿಸುವಂತಾಗಿದೆ. ಮನೆಗಳ ಗೋಡೆಗಳು ಹಾಗೂ ತಡೆಗೋಡೆಗಳು ಬಿರುಕು ಬಿಟ್ಟಿವೆ. ಕೃಷಿ ತೋಟಕ್ಕೆ ಹಾನಿಯಾಗಿದೆ. ಮಳೆಯಿಂದ ಎಲ್ಲೆಡೆ ನೀರಿನ ಒರತೆ ಉಂಟಾಗಿ ಗುಡ್ಡದ ಮಣ್ಣು ಸಡಿಲಗೊಂಡಿದೆ. ಪರಿಣಾಮ ಪ್ರಕೃತಿ ವಿಕೋಪ ಸಂಭವಿಸುತ್ತಿವೆ. ಹರಿಕೇಶ ಶೆಟ್ಟಿ ನಡಿಗುತ್ತು ಉಳಾಯಿಬೆಟ್ಟು ಪಂಚಾಯಿತಿ ಅಧ್ಯಕ್ಷ ಇಲ್ಲಿನ ಪರಿಸ್ಥಿತಿ ಬಗ್ಗೆ ಮಂಗಳೂರು ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿ ಗಮನಹರಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸಿ ಹರ್ಷವರ್ಧನ ಹಾಗೂ ಎಡಿಸಿ ಸಂತೋಷ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭೂಕುಸಿತದ ಬಳಿಕ ಪೆಮರ್ಂಕಿಪದವು-ಕೈಗುರಿ-ಪಾಲಿಕಟ್ಟೆ-ಅಂಗಡಿಪಡ್ಪು-ಇಡ್ಮ-ಮಲ್ಲೂರು ಭಾಗದ ನಾಗರಿಕರಿಗೆ ಸಂಚಾರ ಬಗ್ಗೆ ತೀವ್ರ ಸಮಸ್ಯೆ ಉಂಟಾಗಿದೆ. ಕೈಗುರಿ ಪ್ರದೇಶಕ್ಕೆ ರಸ್ತೆ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ. ಮಹೇಶ್ ಹೊಳ್ಳ ತಾಪಂ ಕಾರ್ಯನಿರ್ವಹಣಾಧಿಕಾರಿ

ಭಾರಿ ಶಬ್ದ ಕೇಳಿತ್ತು !

ಕೈಗುರಿ ಸುತ್ತಲ ಪ್ರದೇಶದಲ್ಲಿ ಜು.19ರಂದು ರಾತ್ರಿ 9 ಗಂಟೆಯ ಸುಮಾರಿಗೆ ಭಾರಿ ಸದ್ದೊಂದು ಕೇಳಿಸಿತ್ತು. ಅದು ಭೂಕಂಪನದಂತಿತ್ತು. ಇದಾದ ಬಳಿಕ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿದಿತ್ತು. ಆದರೆ ಎಲ್ಲಿ, ಏನು ಎಂಬುದು ಯಾರಿಗೂ ಗೊತ್ತಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಗುಡ್ಡ ಬಗೆದ ಪರಿಣಾಮ

ಕೆತ್ತಿಕಲ್‌ನಲ್ಲೂ ಜು.19ಕ್ಕೆ ಭೂಕುಸಿತ ಸಂಭವಿಸಿ ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಒಳರಸ್ತೆ ಬಿರುಕು ಬಿಟ್ಟು ಒಂದೆಡೆ ಕೆಳಕ್ಕೆ ಮತ್ತೊಂದೆಡೆ ಮೇಲಕ್ಕೆ ಎದ್ದಿತ್ತು. ಭೌಗೋಳಿಕವಾಗಿ ಸೂಕ್ಷ್ಮಾತಿಸೂಕ್ಷ್ಮ ಪ್ರದೇಶವಾಗಿರುವ ಇಲ್ಲೆಲ್ಲ ಅಭಿವೃದ್ಧಿ ಎಂದು ಹೇಳಿಕೊಂಡು ಗುಡ್ಡ ಬಗೆದಿರುವುದರಿಂದ ಗುಡ್ಡದ ಮಣ್ಣು ಸಡಿಲಗೊಂಡಿದೆ. ಮಳೆಗಾಲದಲ್ಲಿ ನೀರಿನ ಒರತೆ ಜಾಸ್ತಿಯಾಗಿ ಇಲ್ಲೆಲ್ಲ ಗುಡ್ಡಕುಸಿತ-ಭೂಕುಸಿತ ಸಂಭವಿಸುತ್ತಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net