ಲೋಧಿಗಲ್ಲಿಯಲ್ಲಿ ಭೂಕುಸಿತ

17 NRD-1
Published on

ನರಗುಂದ: ಭೂ ಕುಸಿತದಿಂದ ಉಂಟಾದ ಗುಂಡಿಯಲ್ಲಿ ಸಿಲುಕಿದ್ದ 8 ತಿಂಗಳ ಗರ್ಭಿಣಿಯೊಬ್ಬಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದಲ್ಲಿ ಸೋಮವಾರ ಸಂಭವಿಸಿದೆ.

ಲೋಧಿಗಲ್ಲಿ ಬಡಾವಣೆಯ ಹಸೀನಾ ಮಮ್ಮುಶಾ ಪಠಾಣ ಅಪಾಯದಿಂದ ಪಾರಾದವರು. ಇವರು ತೊಳೆದು ಹಾಕಲಾಗಿದ್ದ ಬಟ್ಟೆಗಳನ್ನು ತರಲು ಮುಂದಾದಾಗ ಏಕಾಏಕಿ ಭೂ ಕುಸಿತವಾಗಿ ಸಣ್ಣ ಗುಂಡಿ ನಿರ್ವಣವಾಗಿ ಎರಡೂ ಕಾಲುಗಳು ಸಿಲುಕಿಕೊಂಡವು. ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಸಹಾಯಕ್ಕಾಗಿ ಕಿರುಚಿಕೊಂಡರೂ ಪ್ರಯೋಜನವಾಗಿಲ್ಲ. ಹೀಗಾಗಿ ಪಕ್ಕದಲ್ಲೇ ಇದ್ದ ನಲ್ಲಿಯನ್ನು ಹಿಡಿದು ನಿಧಾನವಾಗಿ ಮೇಲೆದ್ದು ಅಪಾಯದಿಂದ ಪಾರಾದರು. ಇಲ್ಲಿ ಬಿದ್ದಿರುವ ಗುಂಡಿ ಮೇಲ್ನೋಟಕ್ಕೆ ಚಿಕ್ಕದಾಗಿ ಕಂಡರೂ ಒಳಗಡೆ ಬೃಹದಾಕಾರದಲ್ಲಿದೆ. 10 ವರ್ಷಗಳ ಹಿಂದೆ ಇದೇ ಬಡಾವಣೆಯೊಂದರಲ್ಲಿ ಮೂರು ಭೂಕುಸಿತಗಳು ಸಂಭವಿಸಿದ್ದವು. ಇದೀಗ ಮತ್ತೆ ಸಂಭವಿಸಿರುವ ಭೂಕುಸಿತದಿಂದಾಗಿ ರಾಜೇಸಾಬ್ ನಾಲಬಂದ, ಶಬ್ಬೀರ್ ನಾಲಬಂದ, ಇಮಾಮಸಾಬ್ ನಾಲಬಂದ ಎಂಬುವರ ಮನೆಯ ಗೋಡೆಗಳು ಸ್ವಲ್ಪ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು, ನೀರಿನಿಂದ ತಂಪು ಹಿಡಿದಿವೆ. ಸ್ಥಳಕ್ಕೆ ಪುರಸಭೆ ಉಪಾಧ್ಯಕ್ಷ ಪ್ರಶಾಂತ ಜೋಶಿ, ಸದಸ್ಯ ರಾಚನಗೌಡ ಪಾಟೀಲ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಭೇಟಿ ನೀಡಿ ಪರಿಶೀಲಿಸಿ ಗುಂಡಿ ಮುಚ್ಚಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net