

ಸರಗೂರು: ತಾಲೂಕಿನಲ್ಲಿ ಮಳೆ ಆರ್ಭಟಕ್ಕೆ ಕಬಿನಿ ನದಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದು ಹಲವೆಡೆ ಜಮೀನುಗಳು ಜಲಾವೃತಗೊಂಡಿವೆ.
ಬಿದರಹಳ್ಳಿ ಸರ್ಕಲ್ ಬಳಿ ಇರುವ ಅಗತ್ತೂರು ಸಾಗರೆ ಗ್ರಾಮದ ಹತ್ತಿರ ಸೇತುವೆ ಮುಳುಗಿ ಗುರುವಾರ ಮಧ್ಯಾಹ್ನಯಿಂದಲೇ ಬಿದರಹಳ್ಳಿ-ಬಸಾಪುರ, ಕೆಂಚನಹಳ್ಳಿ, ಬೀರಂಬಳ್ಳಿ, ಎನ್.ಬೇಗೂರು, ಗೆಂಡತ್ತೂರಿಗೆ ಬಸ್ ಸಂಚಾರ ಬಂದ್ ಆಗಿದೆ.
ಎಚ್.ಡಿ.ಕೋಟೆಯಿಂದ ಬೀಚನಹಳ್ಳಿ ಮಾರ್ಗದ ಕಬಿನಿ ಜಲಾಶಯದ ಮುಂಭಾಗದಲ್ಲಿ ಇರುವ ಸೇತುವೆ ಮೂಲಕ ವಾಹನ ಸವಾರರು ಸಂಚರಿಸುತ್ತಿದ್ದರು. ಆದರೆ ಜಲಾಶಯದಲ್ಲಿ ನದಿಗೆ ನೀರು ಬಿಡಲಾಗಿದ್ದರಿಂದ ಸಂಚಾರ ಸ್ಥಗಿತಗೊಳಿಸಲಾಗಿತ್ತು. ನಂತರ ಸರಗೂರು ಪಟ್ಟಣದಿಂದ ಸಾಗರೆ-ಬಿದರಹಳ್ಳಿ ಸರ್ಕಲ್ ಮೂಲಕ ವಿವಿಧ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಕ್ಕೆ ಬಿಡುತ್ತಿರುವುದರಿಂದ ತಗ್ಗು ಪ್ರದೇಶದಲ್ಲಿರುವ ಜಮೀನಿಗಳು, ರಸ್ತೆಗಳು ಮುಳುಗಿವೆ. ಬಿದರಹಳ್ಳಿ ಸರ್ಕಲ್, ಅಗತ್ತೂರು, ಸಾಗರೆ, ಸರಗೂರು ಪಟ್ಟಣದಲ್ಲಿ ರಸ್ತೆಗಳು ಜಲಾವೃತವಾಗಿ ಬಸಾಪುರ, ಕೆಂಚನಹಳ್ಳಿ, ಬೀರಂಬಳ್ಳಿ, ಎನ್.ಬೇಗೂರಿಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವಂತಾಯಿತು.
ತಾಲೂಕಿನ ಕಬಿನಿ ಜಲಾಶಯದಿಂದ ಹೆಚ್ಚಾಗಿ ನೀರು ಬಿಡುತ್ತಿರುವುದರಿಂದ ತಗ್ಗು ಪ್ರದೇಶದ ಗ್ರಾಮಗಳ ಸೇತುವೆ ಮುಳುಗಡೆಗೊಂಡಿರುವ ರಸ್ತೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಲಕ್ಷ್ಮೀಕಾಂತ್ ಅವರು ಸಿಬ್ಬಂದಿ ಹಾಗೂ ಹೋಮ್ ಗಾರ್ಡ್‌ಗಳನ್ನು ನಿಯೋಜಿಸಿದ್ದಾರೆ.
ಸುರಕ್ಷಿತ ಸ್ಥಳಕ್ಕೆ ತೋಟದ ವಾಸಿಗಳು: ಕಬಿನಿ ಜಲಾಶಯದಿಂದ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದರಿಂದ ಸಾಗರೆ ಗ್ರಾಮದ ಜಮೀನಿನಲ್ಲಿ ತೋಟ ಮಾಡಿಕೊಂಡು ಅಲ್ಲಿಯೇ ವಾಸಿಸುತ್ತಿದ್ದ ರೈತರು ಹೊರಬರಲು ಹರಸಾಹಸಪಡುವಂತಾಗಿದೆ. 70 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ಬಿಡುತ್ತಿರುವುದರಿಂದ ಜಮೀನುಗಳಿಗೆ ನೀರು ನುಗ್ಗಿ ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಬರಲು ಸಾಧ್ಯವಿಲ್ಲದಂತಾಗಿದೆ. ಗ್ರಾಮಸ್ಥರು ಕಂದಾಯ ಇಲಾಖೆ ತಹಸೀಲ್ದಾರ್ ರುಕಿಯಾ ಬೇಗಂ ಅವರಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ನೆರೆಹೊರೆಯವರ ಸಹಾಯದಿಂದ ಜಮೀನಿನಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ.
ಅಗತ್ತೂರು, ಸಾಗರೆ, ಬಿದರಹಳ್ಳಿ, ಕೋತ್ತೇಗಾಲ, ಸರಗೂರು ಪಟ್ಟಣ ಸೇರಿದಂತೆ ಸಾವಿರಾರು ಎಕರೆ ಜಮೀನಿನಲ್ಲಿ ಜಲಾವೃತವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಗಿ, ಭತ್ತ, ಬಾಳೆ, ಶುಂಠಿ, ತೆಂಗಿನಕಾಯಿ ಇನ್ನೂ ಅನೇಕ ಬೆಳೆಗಳು ನಾಶವಾಗಿವೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಪ್ರತಿ ಸಲ ಮಳೆ ಬಂದಾಗ ಕಬಿನಿ ನದಿ ನೀರು ಮನೆಗಳಿಗೆ ನುಗ್ಗುತ್ತದೆ. ಕೆಲ ಮನೆಗಳು ಭಾಗಶಃ ಬಿದ್ದಿವೆ. ನಮಗೆ ಗ್ರಾಮ ಪಂಚಾಯಿತಿಯಿಂದ ನಿವೇಶನ ಕೊಡಬೇಕು ಎಂದು ಮನೆ ಕಳೆದುಕೊಂಡವರು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.
ತಹಸೀಲ್ದಾರ್ ರುಕಿಯಾ ಬೇಗಂ ಮಾತನಾಡಿ, ಕಬಿನಿ ಜಲಾಶಯದಿಂದ ಹೆಚ್ಚಾಗಿ ನೀರು ಬಿಡುತ್ತಿರುವುದರಿಂದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಹೊಳೆಯ ಹತ್ತಿರ ಹೋಗಬೇಡಿ. ದಡದ ಬಳಿ ಇರುವ ಜಮೀನಿನಲ್ಲಿ ದನ-ಕರುಗಳನ್ನು ಮೇಯಿಸಲು ಬಿಡಬೇಡಿ. ಕಬಿನಿಯಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವುದರಿಂದ ಗದ್ದೆಯಲ್ಲಿ ರೈತರು ಕೆಲಸ ಮಾಡಬೇಡಿ ಎಂದು ಮುನ್ಸೂಚನೆ ನೀಡಿದರು. ಗ್ರಾಮ ಲೆಕ್ಕಾಧಿಕಾರಿ ಉಮೇಶ್, ಇತರ ಅಧಿಕಾರಿಗಳು ಇದ್ದರು.