ಜಮೀನುಗಳಾಗಿವೆ ಮದ್ಯಪ್ರಿಯರ ಅಡ್ಡೆ, ಮದ್ಯ ಪಾರ್ಸಲ್ ನಿಯಮ ತಂದ ಅವಾಂತರ, ಕೃಷಿ ಭೂಮಿಯಲ್ಲಿ ಬಾಟಲಿ ಸದ್ದು

story
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಮದ್ಯದಂಗಡಿಗಳಲ್ಲಿ ಪಾರ್ಸಲ್ ಮಾತ್ರ ಎಂಬ ನಿಯಮ ಜಾರಿಯಾದಾಗಿನಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಮಾವು, ತೆಂಗಿನ ತೋಟಗಳೇ ಮದ್ಯಪ್ರಿಯರ ಅಡ್ಡೆಯಾಗಿ ಮಾರ್ಪಾಡಾಗಿವೆ.

ಎಂಆರ್‌ಪಿ ಔಟ್‌ಲೆಟ್, ಎಂಎಸ್‌ಐಎಲ್, ಬಾರ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶವಿಲ್ಲದಿರುವುದರಿಂದ ಪಾರ್ಸಲ್ ತೆಗೆದುಕೊಳ್ಳುತ್ತಿರುವ ಗ್ರಾಹಕರು ಗ್ರಾಮಗಳಲ್ಲಿನ ತೋಟಗಳನ್ನೇ ಕುಡಿಯುವ ತಾಣವನ್ನಾಗಿ ಬಳಸುತ್ತಿದ್ದಾರೆ. ಟೆಟ್ರಾ ಪ್ಯಾಕ್‌ಗಳು, ಒಡೆದ ಮದ್ಯದ ಬಾಟಲಿಗಳಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಇಲ್ಲಿಯವರೆಗೆ ಅಂಗಡಿಗಳಲ್ಲಿ ಮದ್ಯ ಸೇವಿಸಿ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದ ಮದ್ಯಪ್ರಿಯರು ಜಮೀನುಗಳಲ್ಲೇ ಬೀಡುಬಿಡುತ್ತಿದ್ದಾರೆ.

ಮೊದಲಿಗೆ ರಾತ್ರಿ ವೇಳೆ 10 ಗಂಟೆಗೆ ಮದ್ಯದಂಗಡಿ ಮುಚ್ಚಲಾಗುತ್ತಿತ್ತು. ಮದ್ಯದಂಗಡಿಗಳಲ್ಲಿ ಕುಳಿತ ಗ್ರಾಹಕರನ್ನು ಸಿಬ್ಬಂದಿ ಅವಧಿ ಮುಗಿದ ಬಳಿಕ ಹೊರ ಕಳಿಸುತ್ತಿದ್ದರು. ಆದರೆ ಇತ್ತೀಚಿಗೆ ಜಮೀನುಗಳಲ್ಲಿ ಮದ್ಯ ಸೇವಿಸಿ ಅಲ್ಲಿಯೇ ನಿದ್ರೆಗೆ ಜಾರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬೆಳಗ್ಗೆ ಕೃಷಿ ಚಟುವಟಿಕೆಗಳಿಗೆ ಬರುವ ರೈತರು ಇವರನ್ನು ಕಂಡು ಕೆಂಡಕಾರುತ್ತಿದ್ದಾರೆ. ಇದರೊಂದಿಗೆ ಜಮೀನು ಮಾಲೀಕರು ಹಾಗೂ ಮದ್ಯಪ್ರಿಯರ ನಡುವೆ ಗಲಾಟೆಗಳೂ ನಡೆಯುತ್ತಿವೆ.

ಮದ್ಯದಂಗಡಿ ಸುತ್ತಲಿನ ಜಮೀನುಗಳೇ ಅಡ್ಡೆ:ಮುಖ್ಯವಾಗಿ ಮದ್ಯದಂಗಡಿಗೆ ಸಮೀಪ ಇರುವ ಜಮೀನು ಮಾಲೀಕರಿಗೆ ಇದೊಂದು ತಲೆನೋವಾಗಿದೆ. ಹಲವು ಸಂದರ್ಭಗಳಲ್ಲಿ ಬೆಳಗಿನ ಜಾವವೇ ಮದ್ಯ ಸಮಾರಾಧನೆ ನಡೆಯುತ್ತಿರುವುದು ಜಮೀನು ಮಾಲೀಕರಿಗೆ ಕಿರುಕುಳ ಉಂಟು ಮಾಡುತ್ತಿದೆ.

ತಂಡಗಳ ಅಡ್ಡೆ: ನಾಲ್ಕೈದು ಮಂದಿಯಿಂದ ಹಿಡಿದು ಹತ್ತಾರು ಜನ ಸೇರುತ್ತಿರುವ ದೃಶ್ಯ ಸಾಮಾನ್ಯ ಎನ್ನುವಂತಾಗಿದೆ. ಮದ್ಯಸೇವನೆ ಬಳಿಕ ಜಮೀನುಗಳಲ್ಲೇ ಹೊಡೆದಾಟದಂತಹ ಘಟನೆಗಳು ಇತ್ತೀಚೆಗೆ ಹೆಚ್ಚಾಗಿದೆ ಎಂಬ ಮಾತು ಕೇಳಿಬರುತ್ತಿವೆ.

ನಗರ ಪ್ರದೇಶದಿಂದಲೂ ಎಂಟ್ರಿ: ಜಿಲ್ಲೆ ಬೆಂಗಳೂರು ನಗರಕ್ಕೆ ಹೊಂದಿಕೊಂಡಂತಿರುವುದರಿಂದ ನಗರ ಪ್ರದೇಶದ ಜನರು ಜಿಲ್ಲೆಯಲ್ಲಿನ ಜಮೀನುಗಳನ್ನು ಕುಡಿತಕ್ಕೆ ಅಡ್ಡೆ ಮಾಡಿಕೊಂಡಿದ್ದಾರೆ. ಕಾರು ಮತ್ತಿತರ ವಾಹನಗಳಲ್ಲಿ ಬಂದು ಬಾಟಲಿ ಓಪನ್ ಮಾಡುವ ದೃಶ್ಯ ಕಂಡುಬರುತ್ತಿದೆ. ಮುಖ್ಯವಾಗಿ ದೇವನಹಳ್ಳಿಯಿಂದ ಜಿಲ್ಲಾಧಿಕಾರಿ ಕಚೇರಿ ಸಂಪರ್ಕ ಕಲ್ಪಿಸುವ ಕುಂದಾಣ ರಸ್ತೆಯಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿವೆ ಎಂಬುದು ಈ ಭಾಗದ ಜನರ ಆಕ್ರೋಶವಾಗಿದೆ.

ಮದ್ಯದಂಗಡಿ ಪಕ್ಕದ ಅಂಗಡಿಗಳಲ್ಲಿ ಗುಂಪು: ಮದ್ಯದಂಗಡಿಗಳಲ್ಲಿ ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇಲ್ಲಿ ಮದ್ಯ ಹೊರತುಪಡಿಸಿ ಲೋಟ, ಸಿಗರೇಟ್ ಮತ್ತಿತರ ವಸ್ತುಗಳು ದೊರೆಯುವುದಿಲ್ಲ. ಆದರೆ ಇಂಥ ಮದ್ಯದಂಗಡಿಗಳಿಗೆ ಹೊಂದಿಕೊಂಡಂತಿರುವ ಗೂಡಂಗಡಿಗಳಲ್ಲಿ ಸಿಗರೇಟ್, ಪ್ಲಾಸ್ಟಿಕ್ ಲೋಟ ಮಾರಾಟವಾಗುತ್ತಿದ್ದು, ರಸ್ತೆ ಬದಿಯಲ್ಲೆ ನಿಂತು ಕುಡಿಯುವುದು ಸಿಗರೇಟ್ ಸೇದುವುದು ಸಾಮಾನ್ಯ ಎನ್ನುವಂತಾಗಿದೆ. ಇಂಥ ಅಂಗಡಿಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ದೂರದ ಮಾತಾಗಿದೆ.

ಇತ್ತೀಚಿಗೆ ಜಮೀನಿನ ಕಡೆ ಕಾಲಿಡುವುದಕ್ಕೂ ಭಯವಾಗುತ್ತದೆ, ಎಲ್ಲೆಲ್ಲಿಂದಲೋ ಬಂದ ಕುಡುಕರ ಗುಂಪು ಜಮೀನುಗಳಲ್ಲಿ ಮದ್ಯ ಸೇವಿಸುತ್ತಾರೆ. ಪ್ರಶ್ನಿಸಿದರೆ ಜಗಳಕ್ಕೆ ಬರುತ್ತಾರೆ. ಇದರಿಂದ ತೀವ್ರ ಕಿರಿಕಿರಿ ಎದುರಿಸಬೇಕಾಗಿದೆ. ಕಾಶಿಪತಿ, ಕುಂದಾಣ ಗ್ರಾಮಸ್ಥ ತೋಟಗಳಲ್ಲಿ ಮದ್ಯದ ಬಾಟಲಿ ಒಡೆದು ಹಾಕಲಾಗಿರುತ್ತದೆ. ಟೆಟ್ರಾಪ್ಯಾಕ್, ಪ್ಲಾಸ್ಟಿಕ್ ಲೋಟದ ತ್ಯಾಜ್ಯವೇ ಕಂಡುಬರುತ್ತಿದೆ. ಒಡೆದ ಬಾಟಲಿಗಳಿಂದ ಗಾಜು ಚುಚ್ಚಿಕೊಳ್ಳುವ ಭಯದಲ್ಲೇ ತೋಟಗಳಿಗೆ ಕಾಲಿಡುವ ಪರಿಸ್ಥಿತಿ ಇದೆ. ಬೋರಲಿಂಗಯ್ಯ, ಕೊಯಿರಾ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net