ಬ್ಯಾಡಗಿ ಮುಖ್ಯ ರಸ್ತೆ ಕಾಮಗಾರಿಗೆ ಭೂಮಾಲೀಕರು ಸಹಕಾರ ನೀಡಲಿ

Landowners should cooperate with the Byadgi main road work
Published on

ಬ್ಯಾಡಗಿ: ಮುಖ್ಯರಸ್ತೆಯ ಮಧ್ಯದಿಂದ 33 ಅಡಿ ಜಾಗ ಬಿಟ್ಟು ಕಟ್ಟಡ ಮಾಲೀಕರು ಹೊಸ ಕಟ್ಟಡ ನಿರ್ವಿುಸಿಕೊಳ್ಳಲು ಯಾವುದೇ ಅಡೆತಡೆ ಇಲ್ಲ. ಭೂ ಮಾಲೀಕರು ತಕರಾರು ಮಾಡದೇ ಮುಖ್ಯ ರಸ್ತೆ ಕಾಮಗಾರಿಗೆ ಸಹಕಾರ ನೀಡಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 30ಕ್ಕೂ ಹೆಚ್ಚು ಸಂಘ-ಸಂಸ್ಥೆ ಹಾಗೂ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ನೇತೃತ್ವದಲ್ಲಿ ರಸ್ತೆ ವಿಸ್ತರಣೆಗೆ ಹೋರಾಟ ನಡೆದಿತ್ತು. ಒಂದು ವಾರಗಳ ಕಾಲ ರಸ್ತೆ ಬಂದ್ ಮಾಡಲಾಗಿತ್ತು. ಆಗ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಭೂ ಮಾಲೀಕರು 33 ಅಡಿ ಸೇರಿದಂತೆ ಒಂದೂವರೆ ಮೀಟರ್ ಸೆಟ್​ಬ್ಯಾಕ್ ರಸ್ತೆ ನಿರ್ವಿುಸಲು ಸ್ವಯಂಪ್ರೇರಣೆಯಿಂದ ಒಪ್ಪಿಗೆ ಕೊಟ್ಟಿದ್ದಾರೆ. ಆದರೆ, ಇದೀಗ 6 ಮೀಟರ್ ಸೆಟ್​ಬ್ಯಾಕ್ ಬಿಡುವ ಕುರಿತು ಗೊಂದಲ ಸೃಷ್ಟಿಸಿ, ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ ಎಂದರು.

ಈಗಲೂ 33 ಅಡಿ ರಸ್ತೆ ಎನ್ನುವುದಕ್ಕೆ ನಾವು ಬದ್ಧವಾಗಿದ್ದೇವೆ. ಮುಖ್ಯರಸ್ತೆ ಕಾಮಗಾರಿ ಮುಗಿದ ಬಳಿಕ ಪಟ್ಟಣ ವ್ಯಾಪ್ತಿಯ ಗಜೇಂದ್ರಗಡ-ಸೊರಬ ಹೆದ್ದಾರಿ ಬ್ಯಾಡಗಿ ಪುರಸಭೆಗೆ ಹಸ್ತಾಂತರ ಮಾಡಲು ಸರ್ಕಾರದ ಆದೇಶವಿದೆ. ಆದರೆ, ಕೆಲವರು ಇಂಜಿನಿಯರ್​ಗಳು ಸರ್ವೆ ಮಾಡಲು ತೆರಳಿದ ಸಂದರ್ಭದಲ್ಲಿ ತೊಂದರೆ, ವಾಗ್ವಾದ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಮಾಲೀಕರು ಬ್ಯಾಡಗಿ ಅಭಿವೃದ್ಧಿಗೆ ಸಹಕರಿಸಿ ಕಾನೂನು ಹೋರಾಟ ಕೈಬಿಡಬೇಕು ಎಂದರು.

ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ಎರಡು ತಿಂಗಳ ಹಿಂದೆ ಬ್ಯಾಡಗಿ ಬಂದ್ ಸಂದರ್ಭದಲ್ಲಿ ಎಲ್ಲ ಮಾಲೀಕರು ಜಿಲ್ಲಾಧಿಕಾರಿಗಳ ಎದುರಲ್ಲಿ 33 ಅಡಿ ರಸ್ತೆ ಅಭಿವೃದ್ಧಿಗೆ ಜಾಗ ಬಿಟ್ಟುಕೊಡಲು ಮಾತು ಕೊಟ್ಟಿದ್ದಾರೆ. ಕೆಲವರು ರಸ್ತೆ ಆಗಬಾರದೆನ್ನುವ ಉದ್ದೇಶದಿಂದ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.

ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯರಾದ ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ಕಾಂಗ್ರೆಸ್ ಘಟಕದ ತಾಲೂಕು ಅಧ್ಯಕ್ಷ ದಾನಪ್ಪ ಚೂರಿ, ಗಂಗಣ್ಣ ಎಲಿ ಇತರರಿದ್ದರು.

ಈ ಹಿಂದೆ ಮಾತುಕೊಟ್ಟಂತೆ ಭೂ ಮಾಲೀಕರು 33 ಅಡಿ ರಸ್ತೆಯೊಂದಿಗೆ ಸೆಟ್​ಬ್ಯಾಕ್ ನಿರ್ವಿುಸಲು ಅವಕಾಶ ಕಲ್ಪಿಸಬೇಕು. 33 ಅಡಿ ಹೊರತುಪಡಿಸಿ ಹೊಸ ಕಟ್ಟಡ ನಿರ್ವಿುಸಲು ಪುರಸಭೆ ಅನುಮತಿ ನೀಡಲಿದೆ. ಬ್ಯಾಡಗಿ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲು ಭೂ ಮಾಲೀಕರು ಸಹಕಾರ ನೀಡಬೇಕು. | ಬಾಲಚಂದ್ರಗೌಡ್ರ ಪಾಟೀಲ ಪುರಸಭೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net