

ಶಿವಮೊಗ್ಗ: ಪದೇಪದೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು-ಶಿವಮೊಗ್ಗ ಇಂಡಿಗೋ ವಿಮಾನ ಈಗ ಮತ್ತೊಮ್ಮೆ ಲ್ಯಾಂಡ್ ಆಗದೇ ಮರಳಿದೆ. ಇದುವರೆಗೆ ಬಿ.ಎಸ್.ಯಡಿಯೂರಪ್ಪ, ಡಾ.ಜಿ.ಪರಮೇಶ್ವರ್ ಮುಂತಾದ ಘಟಾನುಘಟಿ ರಾಜಕೀಯ ನಾಯಕರು ಲ್ಯಾಂಡಿಂಗ್ ಸಮಸ್ಯೆಯಿಂದ ಪರಿತಪಿಸಿದ್ದಿದೆ. ಈ ಬಾರಿ ಇದರ ಬಿಸಿ ತಟ್ಟಿದ್ದು ವಿದೇಶಿ ಉದ್ದಿಮೆದಾರರಿಗೆ.
ಬುಧವಾರ ಬೆಂಗಳೂರಿನಿಂದ ಶಿವಮೊಗ್ಗದತ್ತ ಪ್ರಯಾಣ ಬೆಳೆಸಿದ್ದ ಇಂಡಿಗೋ ವಿಮಾನದಲ್ಲಿ ಅಮೆರಿಕ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ನ ಐದಾರು ಮಂದಿ ಉದ್ದಿಮೆದಾರರಿದ್ದರು. ಅವರೆಲ್ಲರೂ ವ್ಯವಹಾರದ ನಿಮಿತ್ತ ಮಾಚೇನಹಳ್ಳಿಯ ಪ್ರಮುಖ ಕೈಗಾರಿಕೆಯೊಂದಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿದ್ದರು.
ಶಿವಮೊಗ್ಗ ಏರ್‌ಪೋರ್ಟ್ ಮೇಲೆ ಹಾರಿ ಬಂದ ವಿಮಾನ ಮೂರ‌್ನಾಲ್ಕು ಸುತ್ತು ಹಾಕಿತು. ಪ್ರತಿಕೂಲ ಹವಾಮಾನದ ಕಾರಣ ಪೈಲೆಟ್‌ಗೆ ರನ್‌ವೇ ಕಾಣಿಸಲಿಲ್ಲ. ಇದೇ ಕಾರಣದಿಂದ ವಿಮಾನ ಬಂದ ದಾರಿಯಲ್ಲಿ ಮರಳಿತು. ವ್ಯವಹಾರ ನಿಮಿತ್ತ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದ ವಿದೇಶಿ ಉದ್ಯಮಿಗಳೊಂದಿಗೆ ಹಲವಾರು ಮಂದಿ ಮತ್ತೆ ಬೆಂಗಳೂರಿಗೆ ಹೋಗಬೇಕಾಯಿತು.
ಬೆಂಗಳೂರಿನಿಂದ ಇಂಡಿಗೋ ವಿಮಾನ ಆಗಮಿಸುವ 10 ನಿಮಿಷ ಮುನ್ನ ಗೋವಾದಿಂದ ಬಂದ ಸ್ಟಾರ್ ಏರ್‌ಲೈನ್ಸ್ ವಿಮಾನ ಶಿವಮೊಗ್ಗದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಯಿತು. ಮಾತ್ರವಲ್ಲದೇ ಕೆಲವೇ ನಿಮಿಷದಲ್ಲಿ ಅದು ತಿರುಪತಿಗೆ ಟೇಕಾಫ್ ಆಯಿತು. ಆದರೆ ಇಂಡಿಗೋ ವಿಮಾನಕ್ಕೆ ಮಾತ್ರ ಪ್ರತಿಕೂಲ ಹವಾಮಾನ ಎದುರಾಗಿದ್ದು ಆಶ್ಚರ್ಯ.
ಬ್ರಾೃಂಡ್ ಶಿವಮೊಗ್ಗ ಸೃಷ್ಟಿಯಾಗುವ ನಿಟ್ಟಿನಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಈಗ ಬ್ಯಾಡ್ ಶಿವಮೊಗ್ಗ ಸ್ಥಿತಿ ನಿರ್ಮಿಸುತ್ತಿದೆ. ಏರ್‌ಪೋರ್ಟ್ ನಿರ್ವಹಣೆಯನ್ನು ವಹಿಸಿಕೊಂಡಿರುವ ರಾಜ್ಯ ಸರ್ಕಾರ ನೈಟ್ ಲ್ಯಾಂಡಿಗ್ ವ್ಯವಸ್ಥೆ ಕಲ್ಪಿಸಲು ವಿಳಂಬನೀತಿ ಅನುಸರಿಸುತ್ತಿದೆ. ಇದರಿಂದ ಪ್ರಯಾಣಿಕರು ಪರಿತಪಿಸುವಂತಾಗಿದೆ. ಇದು ವಿಮಾನಯಾನ ಸೇವೆ, ಪ್ರವಾಸೋದ್ಯಮ ಹಾಗೂ ಆರ್ಥಿಕ ವಲಯದ ಮೇಲೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಬೀರುವುದು ನಿಶ್ಚಿತ.