ಐದು ಕೋಟಿ ರೂ.ಮೌಲ್ಯದ ಭೂಮಿ ಸರ್ಕಾರದ ವಶಕ್ಕೆ

17 skpp 1
ಒತ್ತುವರಿ ಭೂಮಿ ವಶಕ್ಕೆ ಪಡೆದ ಆನೇಮಹಲ್ ಗ್ರಾಮಾಡಳಿತ.
Published on

ಸಕಲೇಶಪುರ: ಮೂರು ದಶಕಗಳಿಂದ ಒತ್ತುವರಿಯಾಗಿದ್ದ ಸುಮಾರು ಐದು ಕೋಟಿ ರೂ.ಮೌಲ್ಯದ ಸರ್ಕಾರಿ ಭೂಮಿಯನ್ನು ಆನೇಮಹಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ವಶಕ್ಕೆ ಪಡೆದಿದ್ದಾರೆ.

ಪಟ್ಟಣದ ಹೊರವಲಯದ ಆನೇಮಹಲ್ ಗ್ರಾಪಂ ವ್ಯಾಪ್ತಿಗೆ ಸೇರುವ ಸುಮಾರು ಅರ್ಧ ಎಕರೆ ಭೂಮಿಯನ್ನು ಕಳೆದ ಮೂವತ್ತು ವರ್ಷಗಳಿಂದ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ವಾಣಿಜ್ಯ ವಹಿವಾಟು ನಡೆಸುತ್ತಿದ್ದರು. ಆದರೆ, 1967 ರಲ್ಲಿ ನಿವೇಶನ ಅಭಿವೃದ್ಧಿ ಪಡಿಸುವ ವೇಳೆ ಈ ಭೂಮಿಯನ್ನು ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಲಾಗಿದ್ದ ವಿಚಾರ ಕಡತ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಇದರಿಂದ ತಕ್ಷಣವೇ ಎಚ್ಚೆತ್ತ ಗ್ರಾಪಂ ಆಡಳಿತ ಪೊಲೀಸ್ ಭದ್ರತೆಯೊಂದಿಗೆ ಭೂಮಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿರುವ ಈ ಭೂಮಿ ಮೌಲ್ಯ ಸುಮಾರು ಐದು ಕೋಟಿ ರೂ.ಗೂ ಅಧಿಕ ಎನ್ನಲಾಗಿದೆ.

ಅಮಿಷಕ್ಕೆ ಜಗ್ಗದ ಪಿಡಿಒ: ಒತ್ತುವರಿ ತೆರವುಗೊಳಿಸದಂತೆ ವ್ಯಕ್ತಿಯೊಬ್ಬರು ಅಭಿವೃದ್ಧಿ ಅಧಿಕಾರಿಗೆ ಬರೊಬ್ಬರಿ 10 ಲಕ್ಷ ರೂ. ಆಮಿಷ ಒಡ್ಡಿದ್ದರು ಎನ್ನಲಾಗಿದೆ. ಆದರೆ, ಇದಕ್ಕೆ ಜಗ್ಗದ ಅಧಿಕಾರಿ ಕಾರ್ಯಚರಣೆಯ ಮೂಲಕ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆ ವೇಳೆ ಗ್ರಾ.ಪಂ. ಅಧ್ಯಕ್ಷ ಸತಾರ್ ಸುಲ್ತಾನ್, ಸದಸ್ಯರಾದ ಹಸೈನರ್, ತಿಮ್ಮಯ್ಯ ಕಾರ್ಯದರ್ಶಿ ವಿರೇಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net