ಖಾಸಗಿ ಸ್ವತ್ತಾಯ್ತು ಕೋಟಿ ಮೌಲ್ಯದ ಭೂಮಿ!

klr cmc,webp
Published on

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಕೋಲಾರ ನಗರಸಭೆ ಖರೀದಿಸಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನಿನ ದಾಖಲೆಯನ್ನು ಖಾಸಗಿ ವ್ಯಕ್ತಿಯೊಬ್ಬರು ತಿದ್ದುಪಡಿ ಮಾಡಿ ತಮ್ಮದೇ ಜಮೀನೆಂದು ಬಿಂಬಿಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು ಈಗ ತೀವ್ರ ಚರ್ಚೆ ಹುಟ್ಟುಹಾಕಿದೆ.

ಕೋಲಾರ ತಾಲೂಕು ಕಸಬಾ ಹೋಬಳಿಯ ಖಾದ್ರಿಪುರ ಗ್ರಾಮದ ಸರ್ವೇ ನಂ.29ರ ಪೈಕಿ 1 ಎಕರೆ 19 ಗುಂಟೆ ಜಾಗವು ನಗರಸಭೆಯ ಆಸ್ತಿಯಾಗಿತ್ತು. ಆದರೆ, ಅಧಿಕಾರಿಗಳು, ಸಿಬ್ಬಂದಿಯ ಕರ್ತವ್ಯ ಲೋಪದಿಂದ ಆ ಆಸ್ತಿ ಈಗ ಖಾಸಗಿ ವ್ಯಕ್ತಿಗಳ ಪಾಲಾಗಿದೆ.

ಈ ಬಗ್ಗೆ ನಗರಸಭೆ ಸದಸ್ಯ ಪ್ರವಿಣ್​ಗೌಡ ಅವರು ಪೌರಾಯುಕ್ತ ಎಸ್​. ಪ್ರಸಾದ್​ಗೆ ಗುರುವಾರ ದೂರು ಸಲ್ಲಿಸಿದ್ದಾರೆ.

2001-2002ರಲ್ಲಿ ಮುನಿವೆಂಕಪ್ಪ, ಮುನಿಸೊಣ್ಣಪ್ಪ ಅವರು ಜಂಟಿ ಮಾಲೀಕತ್ವದ ಜಮೀನನ್ನು ಮಹ್ಮದ್​ ಅಕ್ಬರ್​, ಎಸ್​.ಚಾಂದ್​ಪಾಷಾ ಅವರಿಗೆ ಜಿಪಿಎ ಮಾಡಿಕೊಟ್ಟಿದ್ದರು. ಪಟ್ಟಣ, ನಗರಸಭೆ ವ್ಯಾಪ್ತಿಯಲ್ಲಿ ವಾಸವಿರುವ ನಿವೇಶನ, ವಸತಿ ರಹಿತರಿಗೆ ಆಶ್ರಯ ಯೋಜನೆಯಲ್ಲಿ ನಿವೇಶನ ಹಂಚಿಕೆ ಮಾಡಲು ಯೋಜನೆ ರೂಪಿಸಿ, ನಗರಸಭೆ ಹೆಸರಿಗೆ 2002ರ ಮಾ. 6ರಂದು ಆ ಭೂಮಿಯ ಶುದ್ಧ ಕ್ರಯ ಮಾಡಿಸಿಕೊಳ್ಳಲಾಗಿದೆ. ಭೂಮಿ ಖರೀದಿ ಮಾಡಿರುವುದಕ್ಕೆ ದಾಖಲೆಗಳು ಕೂಡ ಸಬ್​ ರಿಜಿಸ್ಟ್ರಾರ್​ ಕಚೇರಿಯಿಂದ ಲಭ್ಯವಾಗಿವೆ.

ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಪತ್ರ ವ್ಯವಹಾರವೂ ನಡೆದಿದೆ. 10 ವರ್ಷಗಳ ನಂತರ (2013ರಲ್ಲಿ) ಪಹಣಿಗಳಲ್ಲಿ ನಾರಾಯಣಮ್ಮ ಕೋಂ ವೆಂಕಟೇಶಪ್ಪ, ನಾರಾಯಣಮ್ಮ ಕೋಂ ಮುನಿಶಾಮಪ್ಪ ಅವರಿಗೆ ಪೌತಿ ಖಾತೆ ಮಾಡಿಕೊಡಲಾಗಿದೆ ಎಂದೂ ನಮೂದಾಗಿದೆ. ಆನಂತರ ಎಜಾಜ್​ ಪಾಷಾ ಎನ್ನುವವರು ಖರೀದಿ ಮಾಡಿ, ಬಡಾವಣೆ ನಿರ್ಮಿಸಿ ಬೇರೆಯವರಿಗೆ ಗುಂಟೆಗಳ ಲೆಕ್ಕದಲ್ಲಿ ಮಾರಾಟ ಮಾಡಿದ್ದಾರೆ.

ಮುನಿವೆಂಕಪ್ಪ, ಮುನಿಸೊಣ್ಣಪ್ಪ ಅವರ ಕುಟುಂಬಸ್ಥರೇ ಜಮೀನನ್ನು ಪೌತಿ ಮಾಡಿಕೊಂಡು ಎಜಾಜ್​ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಈ ಮೊದಲೇ ನಗರಸಭೆಗೆ ಮಾರಾಟ ಮಾಡಿರುವುದನ್ನು ಮರೆ ಮಾಚಿದ್ದಾರೆ. ಜತೆಗೆ ದಾಖಲೆಗಳನ್ನು ತಿದ್ದಿ, ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ನಗರಸಭೆಗೆ ಕ್ರಯ ಆಗಿದ್ದಾಗಲೇ ಖಾತೆ ಮಾಡಿಕೊಂಡಿದ್ದರೆ ಜಾಗ ಖಾಸಗಿಯವರ ಪಾಲಾಗುತ್ತಿರಲಿಲ್ಲ ಎನ್ನಲಾಗಿದೆ.

* ಪೌರಾಯುಕ್ತರ ಸಹಿ ನಕಲು!

ಖಾಸಗಿಯವರು ಜಮೀನನ್ನು ಸ್ವಾಧಿನಪಡಿಸಿಕೊಂಡು ಬಡಾವಣೆಯನ್ನಾಗಿ ನಿರ್ಮಾಣ ಮಾಡುತ್ತಿದ್ದ ಬಗ್ಗೆ ನಗರಸಭೆ ಸದಸ್ಯ ಪ್ರವಿಣ್​ಗೌಡ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಾಗ, ಎಚ್ಚೆತ್ತುಕೊಂಡ ಅಧಿಕಾರಿಗಳು ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಪತ್ರ ಬರೆದು ಬೇರೆಯವರಿಗೆ ವಹಿವಾಟು ನಡೆಸದಂತೆ ಕೋರಿದ್ದರು. ಇದಕ್ಕೆ ಒಪ್ಪಿಗೆ ವ್ಯಕ್ತಪಡಿಸಿ ಪತ್ರವನ್ನೂ ರವಾನಿಸಿದ್ದರು. ತದ ನಂತರದ ದಿನಗಳಲ್ಲಿ ನಗರಸಭೆಯ ಪತ್ರವನ್ನು ಸೃಷ್ಟಿಸಿ, ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಜಮೀನು ಸಂಬಂಧ ತಕರಾರು ಇಲ್ಲ ಎಂದು ಮನವಿ ಸಲ್ಲಿಸಲಾಗಿದೆ. ಇದಕ್ಕೆ ಆ ಸಂದರ್ಭದಲ್ಲಿ ಪ್ರಭಾರ ಪೌರಾಯುಕ್ತರಾಗಿದ್ದ, ಯೋಜನಾ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಅಂಬಿಕಾ ಅವರ ಸಹಿ ನಕಲು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

* ಅಕ್ರಮಕ್ಕೆ ಹೊಣೆಯಾರು..?

ಕೋಲಾರ ನಗರಸಭೆಯಾಗಿ ಮೇಲ್ದರ್ಜೆಗೇರಿ ಹಲವು ದಶಕಗಳೇ ಕಳೆದಿದ್ದು, ಈಗ ಮಹಾ ನಗರ ಪಾಲಿಕೆೆ ಮಾಡಬೇಕು ಎಂಬ ಪ್ರಯತ್ನಗಳು ಜೋರಾಗಿಯೇ ನಡೆಯುತ್ತಿವೆ. ಆದರೆ ಇಲ್ಲಿ ದಾಖಲೆ ತಿದ್ದಿರುವವರು ನಗರಸಭೆಯನ್ನು, ಪುರಸಭೆ ಎಂದು ಲೇಟರ್​ ಹೆಡ್​ ಸೃಷ್ಟಿಸಿದ್ದಾರೆ. ಅಲ್ಲದೆ ಅವರಿಗೆ ಅನುಕೂಲಕರವಾಗಿ ಪತ್ರಗಳನ್ನು ಸಬ್​ರಿಜಿಸ್ಟ್ರಾರ್​ ಹಾಗೂ ತಾಲೂಕು ಕಚೇರಿಗೆ ರವಾನಿಸಿದ್ದಾರೆ. ಆ ಮೂಲಕ ಇಡೀ ಜಮೀನನ್ನು ಮಾರಾಟ ಮಾಡಿಕೊಂಡಿದ್ದು, ಇದಕ್ಕೆ ನಗರಸಭೆ ಅಧಿಕಾರಿಗಳು ನೇರ ಹೊಣೆ ಎಂದು ಸದಸ್ಯರು ಆರೋಪಿಸಿದ್ದಾರೆ.

* ನಕಲಿ ಪತ್ರ ಸೃಷ್ಟಿ

ಹಿರಿಯ ಉಪ ನೋಂದಣಾಧಿಕಾರಿಗಳಿಗೆ 2024ರ ನ.27ರಂದು ಕೋಲಾರ ಪುರಸಭೆ ಕಾರ್ಯಾಲಯದಿಂದ ಪತ್ರ ರವಾನೆ ಮಾಡಿದ್ದು, ಇದರಲ್ಲಿ ಖಾದ್ರಿಪುರದ ಸರ್ವೇ ನಂ.29/2 ರಲ್ಲಿ 29.08 ಗುಂಟೆ, ಸರ್ವೇ ನಂ& 29/3 ಪೈಕಿ 29.08 ಗುಂಟೆ ಒಟ್ಟು 1.19 ಗುಂಟೆ ಜಮೀನಿನ ಬಗ್ಗೆ ತಹಸೀಲ್ದಾರ್​ ನ್ಯಾಯಾಲಯದಲ್ಲಿ ಪ್ರಕರಣ ನಡೆದಿದ್ದು, ಖಾತೆದಾರರಾದ ಏಜಾಜ್​ ಪಾಷಾ ಅವರಿಗೆ ಸೇರಿದ್ದಾಗಿರುತ್ತದೆ. ಆದ್ದರಿಂದ ನಗರಸಭೆಯಿಂದ ನೀಡಿರುವ ತಕರಾರು ಅರ್ಜಿ ಹಿಂಪಡೆದು, ಕಚೇರಿ ಕೋರ್ಟ್​ ಪುಸ್ತಕದಲ್ಲಿ ನಮೂದು ಮಾಡಿರುವ ತಕರಾರನ್ನು ತೆಗೆಯಬೇಕು ಎಂದು ಬರೆದಿದ್ದಾರೆ.

ಕೋಟ್​...

ನಗರಸಭೆ ವ್ಯಾಪ್ತಿಯಲ್ಲಿ ಎಷ್ಟು ಸರ್ಕಾರಿ ಸ್ವತ್ತುಗಳಿವೆ ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಹಲವು ಸಭೆಗಳಲ್ಲಿ ನಗರಸಭೆ ಆಸ್ತಿಗಳ ಸಂಬಂಧ ಮಾಹಿತಿ ಕೇಳಿದ್ದು, ಅಧಿಕಾರಿಗಳು ಕೊಡುತ್ತಿಲ್ಲ. ಖಾದ್ರಿಪುರ ಪ್ರಕರಣವು ಸ್ಥಳಿಯರಿಂದ ಗೊತ್ತಾಗಿದ್ದು, ದಾಖಲೆಗಳ ಸಮೇತ ಅಧಿಕಾರಿಗಳಿಗೆ ನೀಡಿದ್ದೇನೆ. ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸುತ್ತೇನೆ.

- ಪ್ರವಿಣ್​ಗೌಡ, ನಗರ ಸಭೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net