ಒತ್ತುವರಿ ತೆರವಿಗೆ ಗ್ರಾಮಸ್ಥರು ಸಹಕರಿಸಿ

09 yelandur 02
ಯಳಂದೂರು ತಾಲೂಕಿನ ಕೊಮಾರನಪುರ ಗ್ರಾಮದ ಲಿಂಗಾಯಿತ ಬೀದಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
Published on

ಯಳಂದೂರು: ಗ್ರಾಮೀಣ ಭಾಗದಲ್ಲಿ ನಡೆಯುವ ಕಾಮಗಾರಿಯ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ರಸ್ತೆ, ಚರಂಡಿ ಕಾಮಗಾರಿಗಳ ಸಂದರ್ಭದಲ್ಲಿ ಗ್ರಾಮಸ್ಥರು ಒತ್ತುವರಿ ಮಾಡಿಕೊಂಡಿರುವ ಸ್ಥಳವನ್ನು ತೆರವುಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮನವಿ ಮಾಡಿದರು.

ಸೋಮವಾರ ತಾಲೂಕಿನ ಕೊಮಾರನಪುರ ಗ್ರಾಮದಲ್ಲಿ ಲಿಂಗಾಯಿತ ಬಡಾವಣೆಯ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಅನೇಕ ಕಡೆ ಸಾರ್ವಜನಿಕರು ಒತ್ತುವರಿ ತೆರವುಗೊಳಿಸಿ ರಸ್ತೆ ನರ್ಮಿಸಿ ಎಂದು ಮನವಿ ಮಾಡುತ್ತಾರೆ. ಸರ್ಕಾರಿ ಜಾಗವಾಗಿದ್ದಲ್ಲಿ ಇದನ್ನು ತೆರವುಗೊಳಿಸಲು ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುತ್ತಾರೆ. ಇದಕ್ಕೆ ಸ್ಥಳೀಯರು ಸಹಕರಿಸಬೇಕು ಎಂದರು.

ಕೊಮಾರನಪುರ ಗ್ರಾಮದ ಈ ರಸ್ತೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಈಗ 20 ಲಕ್ಷ ರೂ. ವೆಚ್ಚದಲ್ಲಿ 80 ಮೀಟರ್ ಚರಂಡಿ, 100 ಮೀಟರ್ ರಸ್ತೆ ಹಾಗೂ 2 ಕಡೆ ಡೆಕ್ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಇಲ್ಲಿನ ಕಾಮಗಾರಿಯನ್ನು ಗುಣಮಟ್ಟದಲ್ಲಿ ಮಾಡಬೇಕು ಎಂದು ಸಂಬಂಧಪಟ್ಟ ಇಲಾಖೆಯ ಜೆಇ ಹಾಗೂ ಗುತ್ತಿಗೆದಾರನಿಗೆ ಸೂಚನೆ ನೀಡಿದರು. ಗುಂಬಳ್ಳಿ ಗ್ರಾಮದಿಂದ ಕೊಮಾರನಪುರ ರಸ್ತೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ಪಡೆದ ವ್ಯಕ್ತಿ ಈ ಕೆಲಸವನ್ನು ಮಾಡಲೇ ಇಲ್ಲ. ಸರ್ಕಾರಕ್ಕೆ ಈ ಹಣ ವಾಪಸಾಗಿತ್ತು. ಮತ್ತೆ ನಾನು ಸರ್ಕಾರದಿಂದ ಈ ಹಣವನ್ನು ಮರು ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಕಾಮಗಾರಿ ವಿಳಂಬವಾಗಿದ್ದು ಈಗಾಗಲೇ ಸಂಬಂಧಪಟ್ಟವರಿಗೆ ನಾನು ಸೂಚನೆ ನೀಡಿದ್ದು ಆದಷ್ಟು ಬೇಗ ಈ ಕೆಲಸ ಆರಂಭಗೊಳ್ಳಲು ಕ್ರಮ ವಹಿಸುತ್ತೇನೆ ಎಂದರು.

ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಮುಖಂಡರಾದ ವರ್ಧನ್, ರಂಗರಾಮು, ಪ್ರಕಾಶ್, ಕಂದಹಳ್ಳಿ ನಂಜುಂಡಸ್ವಾಮಿ, ಚಾಮುಲ್ ನಿರ್ದೇಶಕ ರೇವಣ್ಣ, ಶಿವಕುಮಾರ್, ವೀರಭದ್ರಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net