

ಚಿಕ್ಕೋಡಿ: ವಿದ್ಯಾರ್ಥಿಗಳಿಗೆ ಭಾಷೆ, ನೆಲ, ಜಲ ಕುರಿತು ಸಾಹಿತ್ಯದ ಮೂಲಕ ತಿಳಿಸಿದಾಗ ಮಾತ್ರ ಚುಟುಕು ಸಾಹಿತ್ಯ ಕಲ್ಪನೆ ಮೂಡುತ್ತದೆ ಎಂದು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಅರಬಾಂವಿ ಹೇಳಿದರು.
ಪಟ್ಟಣದ ಡಯಟ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಘಟಕದ ಚು.ಸಾ.ಪ. ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ-ಸಣ್ಣ ಹಾಸ್ಯ, ಕಥೆ, ಕವನ, ಚುಟುಕು ಬರೆಯುವ ಮೂಲಕ ವಿದ್ಯಾರ್ಥಿಗಳು ಸಾಹಿತಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.
ಚು.ಸಾ.ಪ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರಗಿ ಮಾತನಾಡಿ, ಸಾಹಿತಿಗಳು ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ಗೋಷ್ಠಿ ಏರ್ಪಡಿಸುವ ಮೂಲಕ ಸಾಹಿತ್ಯ ಶಕ್ತಿ ಹೆಚ್ಚಿಸುವಂತೆ ಮನವಿ ಮಾಡಿದರು.
ತಾಲೂಕಿನ ಪ್ರಧಾನ ಕಾರ್ಯದರ್ಶಿ ಎಚ್.ಡಿ.ದರ್ಗಾದ, ಪದ್ಮಶ್ರೀ, ಶಿವಾನಂದ ಭಾಗಾಯಿ, ಪುಷ್ಪಾ ಕುಂಬಾರ, ಉಮೇಶ ತೋಟದ, ಬಸವರಾಜ ಹೊನ್ನಗೌಡರ, ಲಲಿತಾ ಹಿರೇಮಠ, ಐ.ಜಿ.ಹೋಗಿ, ರೇಣುಕಾ ಮಾಳಗೆ, ಜೆ.ಆರ್.ದಿನಕರ, ಸಿ.ಎಲ್.ಯಾದಗೂಡೆ ಇತರರಿದ್ದರು. ಬಿ.ಡಿ.ರಾಜಗೂಳೆ ಸ್ವಾಗತಿಸಿದರು. ಉದಯ ಹರಗಾಪುರೆ ನಿರೂಪಿಸಿದರು. ದಾದಾ ಕಾಂಬಳೆ ವಂದಿಸಿದರು.