ಜಮೀನು ಕಬಳಿಸಿದವರ ಮೇಲೆ ಕ್ರಮವಾಗಲಿ

23Jaggu5
ಶಾಸಕ ಅಭಯ ಪಾಟೀಲ ಹಾಗೂ ಸಹೋದರರು ಖಾದರವಾಡಿ ರೈತರ ಜಮೀನು ಕಬಳಿಸಿ ರೈತರನ್ನು ವಂಚಿಸಿದ್ದಾರೆಂದು ಆರೋಪಿಸಿದ ಗ್ರಾಮದ ರೈತರು, ನ್ಯಾಯ ಕಲ್ಪಿಸುವಂತೆ ಒತ್ತಾಯಿಸಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಬಾಲಕೃಷ್ಣ ಕಡ್ಲಿಕರ, ವಿಶಾಲ ಧಮ್ನೇಕರ, ರೋಹಿದಾಸ ಪಾಟೀಲ, ಅಪ್ಪಾಜಿ ಗೋರಲ್, ಮಹಾದೇವ ಶಿವಂಗೇಕರ, ಬಲರಾಮ್ ಪಿಂಗಟ ಇತರರಿದ್ದರು.
Published on

ಬೆಳಗಾವಿ: ಜೀವನೋಪಾಯಕ್ಕೆ ಆಧಾರವಾದ ರೈತರ 360 ಪೈಕಿ 155 ಎಕರೆ ಜಮೀನನ್ನು ಶಾಸಕ ಅಭಯ ಪಾಟೀಲ ಹಾಗೂ ಸಹೋದರರು ಕಬಳಿಸಿ ರೈತರನ್ನು ವಂಚಿಸಿದ್ದಾರೆ. ಜಮೀನು ಕೇಳಲು ಹೋದ ರೈತರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಖಾದರವಾಡಿ ಗ್ರಾಮದ ರೈತರು ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರಿಗೆ ಮನವಿ ಸಲ್ಲಿಸಿದರು.

ಇದಕ್ಕೂ ಮೊದಲು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಆಗಮಿಸಿದ ನೂರಾರು ರೈತರು ಶ್ರೀರಾಮ ಸೇನೆ ಹಿಂದೂಸ್ತಾನ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್ ನೇತೃತ್ವದಲ್ಲಿ ಪ್ರತಿಭಟಿಸಿ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಪ್ರತಿಭಟಿಸಿದರು. ಜಮೀನು ಸ್ವಾತಂತ್ರ್ಯ ಪೂರ್ವದಿಂದಲೂ ಈವರೆಗೂ ರೈತರ ಬಳಿ ಇದೆ. ಆದರೆ, ಕೆಲ ಭೂ ಮಾಫಿಯಾ ದಲ್ಲಾಳಿಗಳು ಜನಪ್ರತಿನಿಧಿಗಳ ಜತೆಗೆ ಕೂಡಿಕೊಂಡು ರೈತರಿಗೆ ಬುಡಾದಿಂದ ನೋಟಿಸ್ ಕೊಟ್ಟು ಪ್ರತಿ ಎಕರೆಗೆ 13 ಲಕ್ಷ ರೂ.ಯಂತೆ ಖರೀದಿ ಮಾಡಿದ್ದಾರೆ. ಅದೇ ಜಮೀನು ಮರಳಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿ ಎಕರೆಗೆ 1.8 ಕೋಟಿ ರೂ. ಮಾರಾಟ ಮಾಡಿದ್ದಾರೆ. ಉಳುವ ಭೂಮಿ ಪಡೆದು ರೈತರಿಗೆ ಮೋಸ ಮಾಡಿದ್ದಾರೆ. ಮಾರಾಟ ಮಾಡಿದ ಹಣವನ್ನು ನೀಡದೆ ವಂಚಿಸಿದ್ದಾರೆ. ಜಮೀನು ಕಳೆದುಕೊಂಡು ರೈತರು ಬೀದಿಗೆ ಬಂದಿದ್ದಾರೆ. ರೈತರಿಗೆ ಮೋಸ ಮಾಡಿದ ಭೂ ಮಾಫಿಯಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶ್ರೀರಾಮಸೇನೆ ಹಿಂದೂಸ್ತಾನ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಮಾತನಾಡಿ, ಖಾದರವಾಡಿ ಗ್ರಾಮದ 1,200 ಕುಟುಂಬದವರು ಜಮೀನನ ಮೇಲೆ ಅವಲಂಬಿತರಾಗಿದ್ದಾರೆ. ಈ ಜಮೀನನ್ನು ಬುಡಾ ಸ್ವಾಧೀನ ಪಡಿಸಿಕೊಳ್ಳಲಿದೆ ಎಂದು ಶಾಸಕರ ಬೆಂಬಲಿಗರು ನಕಲಿ ನೋಟಿಸ್ ರವಾನಿಸಿದ್ದಾರೆ ಎಂದು ಆರೋಪಿಸಿದರು. ಶಾಸಕ ಅಭಯ ಪಾಟೀಲ ಹಾಗೂ ಬೆಂಬಲಿಗರು ಧಮ್ಕಿ ಹಾಕಿ 155 ಎಕರೆ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಿದರು. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಪ್ರೀತಂ ನಸಲಾಪುರೆ, ಶೀತಲ್ ಪಾಟೀಲ್ ಹಾಗೂ ಸಂತೋಷ ಪಾಟೀಲ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಬಾಲಕೃಷ್ಣ ಕಡ್ಲಿಕರ, ವಿಶಾಲ ಧಮ್ನೇಕರ, ರೋಹಿದಾಸ ಪಾಟೀಲ, ಅಪ್ಪಾಜಿ ಗೋರಲ್, ಮಹಾದೇವ ಶಿವಂಗೇಕರ, ಬಲರಾಮ್ ಮಹಾದೇವ ಪಿಂಗಟ, ಅನಿಲ್ ಮಾಳವಿ, ಶಂಕರ್ ಶಿವಂಗೇಕರ, ನಾರಾಯಣ ಪಾಟೀಲ, ಪರಶುರಾಮ ಪಾಟೀಲ, ಕಲ್ಲಪ್ಪ ಪಾಟೀಲ, ನಿಂಗಪ್ಪ ಮಾಳವಿ, ಪಿರಾಜಿ ಡೋಲೇಕರ, ಬಾಲು ಬಸ್ತವಾಡಕರ, ಮಾರುತಿ ಬಸ್ತವಾಡಕರ, ಮನೋಹರ ಕಡ್ಲಿಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net